ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ಇಂಗ್ಲೆಂಡ್ ನ ಕ್ರಿಸ್ ವೋಕ್ಸ್ ನಿವೃತ್ತಿ
ಕ್ರಿಸ್ ವೋಕ್ಸ್ | Credit : X \ @PCA
ಲಂಡನ್, ಸೆ.29: ಇಂಗ್ಲೆಂಡ್ ತಂಡದ ವೇಗದ ಬೌಲರ್ ಕ್ರಿಸ್ ವೋಕ್ಸ್ ಎಲ್ಲ ಮಾದರಿಯ ಅಂತರ್‌ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಾಗಿ ಸೋಮವಾರ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಘೋಷಿಸಿದ್ದಾರೆ.
36ರ ವಯಸ್ಸಿನ ಮಧ್ಯಮ ವೇಗದ ಬೌಲರ್ ವೋಕ್ಸ್ ಭಾರತ ವಿರುದ್ಧ ಓವಲ್ ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಕೊನೆಯ ಬಾರಿ ತನ್ನ ದೇಶವನ್ನು ಪ್ರತಿನಿಧಿಸಿದ್ದರು. ಭುಜಕ್ಕೆ ಗಾಯವಾದ ನಂತರ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿದ್ದ ವೋಕ್ಸ್ ಎಲ್ಲರ ಗಮನ ಸೆಳೆದಿದ್ದರು.
2011ರಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಟಿ-20 ಪಂದ್ಯವನ್ನಾಡುವ ಮೂಲಕ ವೋಕ್ಸ್ ಇಂಗ್ಲೆಂಡ್ ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ್ದರು. ವಿಶೇಷವಾಗಿ ಟೆಸ್ಟ್ ಕ್ರಿಕೆಟಿನಲ್ಲಿ ಸ್ವದೇಶದ ವಾತಾವರಣದಲ್ಲಿ ಹೆಚ್ಚು ಮಿಂಚಿದ್ದರು.
12 ವರ್ಷಗಳ ವೃತ್ತಿಜೀವನದಲ್ಲಿ 62 ಟೆಸ್ಟ್ ಪಂದ್ಯಗಳನ್ನು ಆಡಿರುವ ವಾರ್ವಿಕ್‌ಶೈರ್ ಆಲ್‌ರೌಂಡರ್ ವೋಕ್ಸ್ 29.61ರ ಸರಾಸರಿಯಲ್ಲಿ ಒಟ್ಟು 194 ವಿಕೆಟ್‌ಗಳನ್ನು ಕಬಳಿಸಿದ್ದರು. ಬ್ಯಾಟಿಂಗ್‌ನಲ್ಲಿ ಒಂದು ಶತಕ ಹಾಗೂ 7 ಅರ್ಧಶತಕಗಳ ಸಹಿತ 2,034 ರನ್ ಕೊಡುಗೆ ನೀಡಿದ್ದರು.
2019ರಲ್ಲಿ ಸ್ವದೇಶದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಜಯಶಾಲಿಯಾಗಿದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದ ವೋಕ್ಸ್ ಆಸ್ಟ್ರೇಲಿಯ ವಿರುದ್ದ ಸೆಮಿ ಫೈನಲ್‌ನಲ್ಲಿ 3 ವಿಕೆಟ್ ಸಹಿತ 11 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಉರುಳಿಸಿದ್ದರು.
ನ್ಯೂಝಿಲ್ಯಾಂಡ್ ವಿರುದ್ದ ಫೈನಲ್ ಪಂದ್ಯದಲ್ಲಿ ಇನ್ನೂ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಸೂಪರ್ ಓವರ್ ಕೂಡ ಟೈ ಆದಾಗ ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಚಾಂಪಿಯನ್ ಆಗಿತ್ತು.
2022ರಲ್ಲಿ ಆಸ್ಟ್ರೇಲಿಯದಲ್ಲಿ ನಡೆದಿದ್ದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯನ್ನು ಗೆದ್ದಿರುವ ಇಂಗ್ಲೆಂಡ್ ತಂಡದ ಭಾಗವಾಗಿದ್ದರು.
‘‘ನಾನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಲು ಇದು ಸರಿಯಾದ ಸಮಯ ಎಂದು ನಿರ್ಧರಿಸಿದ್ದೇನೆ. ಇಂಗ್ಲೆಂಡ್ ಪರ ಆಡುವುದು ನನ್ನ ಕನಸಾಗಿತ್ತು. ಆ ಕನಸು ನನಸಾಗಿದ್ದು ನನ್ನ ಅದೃಷ್ಟ. ಕೌಂಟಿ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲು ಹಾಗೂ ಮುಂದಿನ ದಿನಗಳಲ್ಲಿ ಹೆಚ್ಚಿನ ಫ್ರಾಂಚೈಸಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇವೆ’’ ಎಂದು ವೋಕ್ಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.