ಕ್ಲಚ್ ಚೆಸ್ ಲೆಜಂಡ್ಸ್ : ಆನಂದ್ ವಿರುದ್ಧ ಕ್ಯಾಸ್ಪರೊವ್‌ಗೆ ಮುನ್ನಡೆ
ವಿಶ್ವನಾಥನ್ ಆನಂದ್ , ಗ್ಯಾರಿ ಕ್ಯಾಸ್ಪರೊವ್ | Photo Credit : NDTV
ಸೇಂಟ್ ಲೂಯಿಸ್, ಅ. 9: ಅಮೆರಿಕದ ಸೇಂಟ್ ಲೂಯಿಸ್‌ನಲ್ಲಿ ನಡೆಯುತ್ತಿರುವ ‘ಕ್ಲಚ್ ಚೆಸ್: ದ ಲೆಜಂಡ್ಸ್’ ಪಂದ್ಯಾವಳಿಯಲ್ಲಿ ಆರಂಭಿಕ ದಿನದಂದು ರಶ್ಯದ ಗ್ಯಾರಿ ಕ್ಯಾಸ್ಪರೊವ್ ಯಶಸ್ಸು ಸಾಧಿಸಿದ್ದಾರೆ. ಅವರು 3ನೇ ಪಂದ್ಯದಲ್ಲಿ ಭಾರತದ ವಿಶ್ವನಾಥನ್ ಆನಂದ್‌ರನ್ನು ಸೋಲಿಸಿ 2.5-1.5ರ ಮುನ್ನಡೆ ಗಳಿಸಿದ್ದಾರೆ.
ಆನಂದ್‌ರಿಗೂ ಗೆಲ್ಲುವ ಅವಕಾಶಗಳು ಇದ್ದರೂ ಅದನ್ನು ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ.
ಈ ದಿಗ್ಗಜರ ನಡುವೆ ನಡೆದ ಮೊದಲ 2 ಪಂದ್ಯಗಳು ಡ್ರಾದಲ್ಲಿ ಮುಕ್ತಾಯಗೊಂಡವು. ಆದರೆ 3ನೇ ಪಂದ್ಯದಲ್ಲಿ ಸ್ಥಾಗಿತ್ಯವನ್ನು ಮುರಿಯುವಲ್ಲಿ ಕ್ಯಾಸ್ಪರೊವ್ ಯಶಸ್ವಿಯಾದರು.
ಮೊದಲ ಪಂದ್ಯದಲ್ಲಿ, ಕ್ಯಾಸ್ಪರೊವ್ ವಿರುದ್ಧ ಆನಂದ್ ಮುನ್ನಡೆ ಗಳಿಸಿದ್ದರು. ಆದರೆ ಆನಂದ್ ಮಾಡಿದ ಅನ್‌ಫೋರ್ಸ್‌ಡ್ ಎರರ್‌ಗಳಿಂದಾಗಿ ವಿಶ್ವದ ಮಾಜಿ ನಂಬರ್ ವನ್ ಆಟಗಾರ ಕ್ಯಾಸ್ಪರೊವ್ ಸೋಲಿನಿಂದ ಪಾರಾದರು.
2ನೇ ಮತ್ತು 4ನೇ ಪಂದ್ಯಗಳೂ ಡ್ರಾ ಆದವು. ಈಗ 1,44,000 ಡಾಲರ್ (ಸುಮಾರು 1.27 ಕೋಟಿ ರೂಪಾಯಿ) ಬಹುಮಾನದ ಪಂದ್ಯಾವಳಿಯಲ್ಲಿ ಈ ಇಬ್ಬರೂ ಆಟಗಾರರ ಅವಕಾಶಗಳು ಸಮಾನವಾಗಿವೆ. ವಿಜೇತರು 70,000 ಡಾಲರ್ (ಸುಮಾರು 62.20 ಲಕ್ಷ ರೂಪಾಯಿ) ನಗದು ಪಡೆದರೆ, ಸೋತವರು 50,000 ಡಾಲರ್ (ಸುಮಾರು 44.43 ಲಕ್ಷ ರೂಪಾಯಿ) ಬಹುಮಾನ ಸ್ವೀಕರಿಸಲಿದ್ದಾರೆ.