ಕಾಮನ್‌ವೆಲ್ತ್ ಗೇಮ್ಸ್ ಚಿನ್ನ ವಿಜೇತ ಬಾಕ್ಸರ್ ಮನೋಜ್ ಕುಮಾರ್ ನಿವೃತ್ತಿ
ಮನೋಜ್ ಕುಮಾರ್ | PTI
ಹೊಸದಿಲ್ಲಿ: ಕಾಮನ್‌ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್ ಮನೋಜ್ ಕುಮಾರ್ ಗುರುವಾರ ನಿವೃತ್ತಿ ಘೋಷಿಸಿದ್ದಾರೆ. ಲೈಟ್ ವೆಲ್ಟರ್‌ವೇಟ್ (64 ಕೆಜಿ) ವಿಭಾಗದಲ್ಲಿ ಮಿಂಚಿದ್ದ ಬಾಕ್ಸರ್, ನಿವೃತ್ತಿ ಬಳಿಕ ಬಾಕ್ಸರ್‌ಗಳಿಗೆ ತರಬೇತಿ ನೀಡುವ ವೃತ್ತಿಯನ್ನು ಕೈಗೆತ್ತಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
39 ವರ್ಷದ ಮನೋಜ್ ಕುಮಾರ್, 2010ರ ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಮತ್ತು 2018ರ ಗೋಲ್ಡ್ ಕೋಸ್ಟ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಅವರು ಏಶ್ಯನ್‌ಎ ಚಾಂಪಿಯನ್‌ಶಿಪ್ಸ್‌ನಲ್ಲಿ ಅವರು ಎರಡು ಬಾರಿ ಕಂಚು ಗೆದ್ದಿದ್ದರು. ಅವರು 2012ರ ಲಂಡನ್ ಒಲಿಂಪಿಕ್ಸ್ ಮತ್ತು 2016ರ ರಿಯೋ ಒಲಿಂಪಿಕ್ಸ್‌ಗಳಲ್ಲೂ ಸ್ಪರ್ಧಿಸಿ ಎರಡೂ ಕ್ರೀಡಾಕೂಟಗಳಲ್ಲಿ ಪ್ರಿಕ್ವಾರ್ಟರ್‌ಫೈನಲ್ ಹಂತವನ್ನು ತಲುಪಿದ್ದರು.
‘‘ಇದು ಚೆನ್ನಾಗಿ ಯೋಚಿಸಿ ತೆಗೆದುಕೊಂಡಿರುವ ನಿರ್ಧಾರವಾಗಿದೆ. ನಲ್ವತ್ತರ ಹರಯಕ್ಕೆ ಕಾಲಿಟ್ಟ ಬಳಿಕ, ಅಂತರ್‌ರಾಷ್ಟ್ರೀಯ ನಿಯಮದಂತೆ ನಾನು ಅಮೆಚೂರ್ ಪಂದ್ಯಾವಳಿಗಳಲ್ಲಿ ಸ್ಪರ್ಧಿಸುವಂತಿಲ್ಲ. ಭಾರತವನ್ನು ಪ್ರತಿನಿಧಿಸಿ ನನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ಸ್ಪರ್ಧಿಸಿದ ಬಳಿಕ ಸಂತೃಪ್ತನಾಗಿ ನಿವೃತ್ತಿಯಾಗುತ್ತಿದ್ದೇನೆ’’ ಎಂದು ಮನೋಜ್ ನುಡಿದರು.
ಅವರು 1997ರಲ್ಲಿ ಬಾಕ್ಸಿಂಗ್ ಅಭ್ಯಾಸ ಆರಂಭಿಸಿದರು. 2021ರಲ್ಲ ಪಾಟಿಯಾಲದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್‌ನಲ್ಲಿ ಕೋಚಿಂಗ್ ಡಿಪ್ಲೋಮಾ ಪೂರ್ಣಗೊಳಿಸಿದರು. 2018ರ ಬಳಿಕ, ಗಾಯಗಳು ಮತ್ತು ಆಯ್ಕೆ ಸಂಬಂಧಿ ವಿವಾದಗಳಿಂದಾಗಿ ಅವರಿಗೆ ಭಾರತವನ್ನು ಪ್ರತಿನಿಧಿಸಲು ಸಾಧ್ಯವಾಗಿರಲಿಲ್ಲ.
ಅವರು ತನ್ನ ಅಣ್ಣ ಹಾಗೂ ಕೋಚ್ ರಾಜೇಶ್ ಕುಮಾರ್ ಜೊತೆಗೆ ಕುರುಕ್ಷೇತ್ರದಲ್ಲಿ ಬಾಕ್ಸಿಂಗ್ ಅಕಾಡೆಮಿಯೊಂದನ್ನು ಸ್ಥಾಪಿಸಿದ್ದಾರೆ.