128 ವರ್ಷಗಳ ನಂತರ ಒಲಿಂಪಿಕ್ಸ್ ಗೆ ಮರಳಲಿರುವ ಕ್ರಿಕೆಟ್: 2028ರ ಲಾಸ್ ಎಂಜಲೀಸ್ ಒಲಿಂಪಿಕ್ಸ್ ಕ್ರಿಕೆಟ್ ಪಂದ್ಯಗಳ ದಿನಾಂಕ ನಿಗದಿ
ಸಾಂದರ್ಭಿಕ ಚಿತ್ರ
ಲಾಸ್ ಏಂಜಲೀಸ್: ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಪುಟವನ್ನು ಪುನಃ ಬರೆಯುವ ಕ್ಷಣ ಬಂದಿದೆ. 1900 ರ ನಂತರ ಮೊದಲ ಬಾರಿಗೆ, ಕ್ರಿಕೆಟ್ ಆಟವು 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ (LA28) ನಲ್ಲಿ ಮರು ಪ್ರವೇಶ ಪಡೆಯುತ್ತಿದೆ. 2028ರ ಜುಲೈ 12 ರಿಂದ ಜುಲೈ 29ರ ತನಕ ನಡೆಯುವ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗಗಳ ಟಿ20 ಕ್ರಿಕೆಟ್ ಪಂದ್ಯಗಳು ನಡೆಯಲಿವೆ.
ಪೊಮೆನಾ ನಗರದ ಫೇರ್‌ಗ್ರೌಂಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಗಳಲ್ಲಿ, ತಲಾ ಆರು ತಂಡಗಳು ಭಾಗವಹಿಸಲಿವೆ. ಪ್ರತಿ ತಂಡದಲ್ಲಿ 15 ಸದಸ್ಯರಿದ್ದು, ಒಟ್ಟು 180 ಆಟಗಾರರು ಕಣಕ್ಕಿಳಿಯಲಿದ್ದಾರೆ. ಸ್ಪರ್ಧೆಯು ಟಿ20 ಮಾದರಿಯಲ್ಲಿದ್ದು, ಹೊಸ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶವನ್ನು ಹೊಂದಿದೆ.
ಜುಲೈ 20ರಂದು ಮಹಿಳಾ ವಿಭಾಗದ ಮತ್ತು ಜುಲೈ 29ರಂದು ಪುರುಷರ ವಿಭಾಗದ ಫೈನಲ್ ಪಂದ್ಯಗಳು ನಡೆಯಲಿವೆ. ಜುಲೈ 14 ಮತ್ತು 21ರಂದು ಮಾತ್ರ ಯಾವುದೇ ಪಂದ್ಯವಿರುವುದಿಲ್ಲ. ಉಳಿದ ಎಲ್ಲಾ ದಿನಗಳಲ್ಲಿ ಟಿ20 ಪಂದ್ಯಗಳು ನಡೆಯಲಿವೆ ಎಂದು LA28 ಸಂಘಟನಾ ಸಮಿತಿ ಪ್ರಕಟಿಸಿದೆ.
1900 ರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವಿನ ಪಂದ್ಯವೇ ಇತಿಹಾಸದಲ್ಲಿಯ ಏಕೈಕ ಒಲಿಂಪಿಕ್ ಕ್ರಿಕೆಟ್ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ ಚಿನ್ನದ ಪದಕ ಗೆದ್ದಿತ್ತು. ಬಳಿಕ ಕ್ರಿಕೆಟ್ ಒಲಿಂಪಿಕ್ಸ್ ನಿಂದ ಹೊರಗುಳಿದಿತ್ತು. ಆದರೆ ಇದೀಗ, ಜಾಗತಿಕ ಆಸಕ್ತಿಯನ್ನು ಸೆಳೆಯುವ ಉದ್ದೇಶದೊಂದಿಗೆ ಮರಳುತ್ತಿದೆ.
ಕ್ರಿಕೆಟ್ ಮೇಲಿನ ಅಮೆರಿಕದ ಪ್ರಭಾವವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 2024 ರ ICC ಪುರುಷರ ಟಿ20 ವಿಶ್ವಕಪ್ ನ ಕೆಲವು ಪಂದ್ಯಗಳು ಟೆಕ್ಸಾಸ್, ಫ್ಲೋರಿಡಾ ಮತ್ತು ನ್ಯೂಯಾರ್ಕ್ ನಂತಹ ನಗರಗಳಲ್ಲಿ ನಡೆದವು. ಇದರಿಂದಾಗಿ ಅಮೆರಿಕದ ಮಣ್ಣಲ್ಲಿಯೂ ಕ್ರಿಕೆಟ್ ಬೆಳೆದು ಬರುತ್ತಿರುವ ದೃಷ್ಟಿಕೋನವನ್ನು ಈ ಕ್ರಮವು ಹೊಂದಿದೆ.
LA28 ಗಾಗಿ ಐಒಸಿ ಆಯ್ಕೆ ಮಾಡಿದ ಐದು ಹೊಸ ಕ್ರೀಡೆಗಳಲ್ಲಿ ಕ್ರಿಕೆಟ್ ಕೂಡಾ ಒಂದು. ಇತರ ಕ್ರೀಡೆಗಳಲ್ಲಿ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸ್), ಮತ್ತು ಸ್ಕ್ವಾಷ್ ಇವೆ. ಈ ಕ್ರೀಡೆಗಳಲ್ಲಿ ಯುವ ಸಮುದಾಯವು ಹೆಚ್ಚಾಗಿ ತೊಡಗಿಸಿಕೊಳ್ಳುವುದು ಮತ್ತು ಜಾಗತಿಕ ಆಕರ್ಷಣೆಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಲಾಸ್ ಏಂಜಲೀಸ್ ನ ಮೇಯರ್ ಕರೆನ್ ಬಾಸ್, "ಕ್ರಿಕೆಟ್ ನ ಮರುಪ್ರವೇಶವು ಕೇವಲ ಸ್ಮರಣೀಯ ಘಟನೆಯಲ್ಲ, ಇದು ಕ್ರಿಕೆಟ್ ಭವಿಷ್ಯವನ್ನು ರೂಪಿಸುವ ಹೆಜ್ಜೆಯಾಗಿದೆ", ಎಂದು ಹೇಳಿದ್ದಾರೆ.
ಒಲಿಂಪಿಕ್ಸ್ ಗೆ ಕ್ರಿಕೆಟ್ ನ ವಾಪಸಾತಿಯನ್ನು ಕ್ರೀಡಾ ಪ್ರಪಂಚ ಮಾತ್ರವಲ್ಲ, ಜಗತ್ತೂ ಆಸಕ್ತಿಯಿಂದ ನಿರೀಕ್ಷಿಸುತ್ತಿದೆ. ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಮತ್ತೊಮ್ಮೆ ಪ್ರಭಾವ ಬೀರುವ ನಿರೀಕ್ಷೆಯಿದೆ.