×
Ad

ವಿಶ್ವಕಪ್: ನಾಲ್ಕನೇ ಶತಕ ಸಿಡಿಸಿದ ಡಿಕಾಕ್

Update: 2023-11-01 16:53 IST

ಕ್ವಿಂಟನ್ ಡಿಕಾಕ್ (Photo: X/@ProteasMenCSA)

ಹೊಸದಿಲ್ಲಿ: ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ 2023ರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ನಾಲ್ಕನೇ ಶತಕವನ್ನು ಪೂರೈಸುವ ಮೂಲಕ ಮಹತ್ವದ ಮೈಲಿಗಲ್ಲು ತಲುಪಿದರು. ನ್ಯೂಝಿಲ್ಯಾಂಡ್ ವಿರುದ್ಧ ಪುಣೆಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಡಿಕಾಕ್ ಈ ಸಾಧನೆ ಮಾಡಿದರು. ಪ್ರಸಕ್ತ ಟೂರ್ನಮೆಂಟ್‌ನಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ಮೊದಲ ಬ್ಯಾಟರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಡಿಕಾಕ್ ಇದೀಗ ಪ್ರಮುಖ ಕ್ಲಬ್‌ಗೆ ಸೇರ್ಪಡೆಯಾಗಿದ್ದು, ಪಂದ್ಯಾವಳಿಯ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ನಾಲ್ಕು ಶತಕಗಳನ್ನು ಗಳಿಸಿರುವ ಮೂರನೇ ಆಟಗಾರನಾಗಿದ್ದಾರೆ. ಈ ಮಹತ್ವದ ಸಾಧನೆ ಮಾಡಿರುವ ಇತರ ಇಬ್ಬರು ಕ್ರಿಕೆಟಿಗರೆಂದರೆ: ಕುಮಾರ ಸಂಗಕ್ಕರ ಹಾಗೂ ರೋಹಿತ್ ಶರ್ಮಾ. ಸಂಗಕ್ಕರ ಆಸ್ಟ್ರೇಲಿಯದಲ್ಲಿ ನಡೆದಿದ್ದ 2015ರ ಆವೃತ್ತಿಯ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ್ದರೆ, ರೋಹಿತ್ ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದಿದ್ದ 2019ರ ಟೂರ್ನಿಯಲ್ಲಿ ಈ ದಾಖಲೆ ನಿರ್ಮಿಸಿದ್ದರು.

ಈಗಾಗಲೇ ಶ್ರೀಲಂಕಾ, ಆಸ್ಟ್ರೇಲಿಯ ಹಾಗೂ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಶತಕಗಳನ್ನು ಗಳಿಸಿರುವ ಡಿಕಾಕ್ ಇಂದು 103 ಎಸೆತಗಳಲ್ಲಿ 8 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ಸಹಾಯದಿಂದ ಏಕದಿನ ಕ್ರಿಕೆಟ್‌ನಲ್ಲಿ 21ನೇ ಶತಕ ಗಳಿಸಿದರು.

ಹಲವು ಬಾರಿ ಔಟಾಗುವುದರಿಂದ ಪಾರಾಗಿದ್ದ ಡಿಕಾಕ್ ಅವರು ಜೇಮ್ಸ್ ನೀಶಾಮ್ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸಿ ತನ್ನದೇ ಶೈಲಿಯಲ್ಲಿ ಶತಕವನ್ನು ಪೂರೈಸಿದರು.

ಇಂದು 69 ರನ್ ತಲುಪಿದ ತಕ್ಷಣ ಟೂರ್ನಿಯಲ್ಲಿ ಒಟ್ಟು 500 ರನ್ ಗಳಿಸಿದರು. ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ಬೆಂಬಲದಿಂದ 62 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ನಂತರ ಡಿಕಾಕ್ ಟಿಮ್ ಸೌಥಿ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿ ಈ ಮೈಲಿಗಲ್ಲು ತಲುಪಿದರು.

30ರ ಹರೆಯದ ಡಿಕಾಕ್ ಪ್ರಸ್ತುತ ವಿಶ್ವಕಪ್‌ನಲ್ಲಿ 85ಕ್ಕೂ ಅಧಿಕ ಸರಾಸರಿಯಲ್ಲಿ ಆಡುತ್ತಿದ್ದಾರೆ. ಈ ಪಂದ್ಯಾವಳಿಯ ನಂತರ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಾಗಿ ಈಗಾಗಲೇ ಘೋಷಿಸಿದ್ದಾರೆ.

ಸದ್ಯ ಕ್ರಿಕೆಟ್ ವಿಶ್ವಕಪ್‌ನಲ್ಲಿ ಗರಿಷ್ಠ ರನ್ ಸ್ಕೋರರ್ ಪಟ್ಟಿಯಲ್ಲಿ ಡಿಕಾಕ್ (545 ರನ್) ಮೊದಲ ಸ್ಥಾನದಲ್ಲಿ ಮುಂದುವರಿದಿದ್ದು, ಆಸ್ಟ್ರೇಲಿಯದ ಡೇವಿಡ್ ವಾರ್ನರ್(413 ರನ್) ಹಾಗೂ ನ್ಯೂಝಿಲ್ಯಾಂಡ್‌ನ ರಚಿನ್ ರವೀಂದ್ರ(406 ರನ್) ಆ ನಂತರದ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News