ಡೆಲ್ಲಿ ಕ್ಯಾಪಿಟಲ್ಸ್ ಸಲಹೆಗಾರನಾಗಿ ಕೆವಿನ್ ಪೀಟರ್ಸನ್ ನೇಮಕ
ಕೆವಿನ್ ಪೀಟರ್ಸನ್ | PTI
ಹೊಸದಿಲ್ಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮಾರ್ಚ್ 21ರಿಂದ ಆರಂಭವಾಗಲಿರುವ 2025ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ತನ್ನ ಸಲಹೆಗಾರರನ್ನಾಗಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್‌ರನ್ನು ಗುರುವಾರ ನೇಮಕ ಮಾಡಿದೆ.
ಫ್ರಾಂಚೈಸಿಯು ಸಾಮಾಜಿಕ ಮಾಧ್ಯಮದ ಮೂಲಕ ಈ ಘೋಷಣೆ ಮಾಡಿದೆ.
ಪೀಟರ್ಸನ್ ಈ ಹಿಂದೆ ಡೆಲ್ಲಿ ತಂಡದ ಪರ ಆಡಿದ್ದರು. ತನ್ನ ಯಶಸ್ವಿ ವೃತ್ತಿಜೀವನದಲ್ಲಿ 104 ಟೆಸ್ಟ್ ಪಂದ್ಯಗಳಲ್ಲಿ 47.78ರ ಸರಾಸರಿಯಲ್ಲಿ 23 ಶತಕ ಹಾಗೂ 35 ಅರ್ಧಶತಕಗಳ ಸಹಿತ ಒಟ್ಟು 8,181 ರನ್ ಗಳಿಸಿದ್ದರು.
136 ಏಕದಿನ ಪಂದ್ಯಗಳಲ್ಲಿ 40.73ರ ಸರಾಸರಿಯಲ್ಲಿ 9 ಶತಕ ಹಾಗೂ 23 ಅರ್ಧಶತಕಗಳ ಸಹಿತ 4,440 ರನ್ ಹಾಗೂ 37 ಟಿ-20 ಪಂದ್ಯಗಳಲ್ಲಿ 37.93ರ ಸರಾಸರಿಯಲ್ಲಿ 1,176 ರನ್ ಗಳಿಸಿದ್ದಾರೆ.
‘ಸ್ವಿಚ್ ಹಿಟ್’ ಹೊಡೆತಕ್ಕೆ ಹೆಸರುವಾಸಿಯಾಗಿದ್ದ ಪೀಟರ್ಸನ್ 2012ರ ಋತುವಿನಲ್ಲಿ ಡೆಲ್ಲಿ ಪರ ಆಡಿದ್ದು, ಒಟ್ಟು 305 ರನ್ ಗಳಿಸಿದ್ದರು.
2014ರ ಐಪಿಎಲ್‌ನಲ್ಲಿ ಡೆಲ್ಲಿ ತಂಡದ ನಾಯಕತ್ವವಹಿಸಿದ್ದರು. 2015ರ ಐಪಿಎಲ್ ವೇಳೆಗೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು.