ಡಬ್ಲ್ಯುಟಿಟಿ ಫೈನಲ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಜೋಡಿ ಮನುಷ್ ಶಾ, ದಿಯಾ ಚಿತಾಲೆ
Photo Courtesy : WTT
ಹೊಸದಿಲ್ಲಿ, ಅ.28: ಡಬ್ಲ್ಯುಟಿಟಿ ಫೈನಲ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಜೋಡಿ ಎನಿಸಿಕೊಂಡಿರುವ ಮನುಷ್ ಶಾ ಹಾಗೂ ದಿಯಾ ಚಿತಾಲೆ ಇತಿಹಾಸ ನಿರ್ಮಿಸಿದ್ದಾರೆ.
ಮಂಗಳವಾರ ಬಿಡುಗಡೆಯಾದ ಡಬ್ಲ್ಯುಟಿಟಿ ಸೀರೀಸ್ ಫೈನಲ್ಸ್ ರೇಸ್ ರ್ಯಾಂಕಿಂಗ್ ಪ್ರಕಾರ ಶಾ ಹಾಗೂ ಚಿತಾಲೆ ವರ್ಷಾಂತ್ಯದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಸ್ಥಾನ ದೃಢಪಡಿಸಿದ ಐದನೇ ಮಿಕ್ಸೆಡ್ ಡಬಲ್ಸ್ ಜೋಡಿಯಾಗಿದೆ. ಡಬ್ಲ್ಯುಟಿಟಿ ಫೈನಲ್ಸ್ ಚೀನಾದ ಹಾಂಕಾಂಗ್‌ನಲ್ಲಿ ಡಿಸೆಂಬರ್ 10ರಿಂದ 14ರ ತನಕ ನಡೆಯಲಿದೆ.
ಮಸ್ಕತ್‌ನಲ್ಲಿ ನ.17ರಿಂದ 22ರ ತನಕ ನಡೆಯಲಿರುವ ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್ ನಂತರ ‘ಡಬ್ಲ್ಯುಟಿಟಿ ಸಿರೀಸ್ ಫೈನಲ್ಸ್ ರೇಸ್’ ರ್ಯಾಂಕಿಂಗ್‌ಗಳು ಡಬ್ಲ್ಯುಟಿಟಿ ಫೈನಲ್ಸ್‌ಗೆ ಸ್ವಯಂ ಆಗಿ ಅರ್ಹತೆ ಪಡೆಯುವ 7 ಜೋಡಿಗಳನ್ನು ನಿರ್ಧರಿಸುತ್ತವೆ. 8ನೇ ಸ್ಥಾನವನ್ನು ಆತಿಥೇಯ ಜೋಡಿ ವೈಲ್ಡ್ ಕಾರ್ಡ್ ಮೂಲಕ ಪಡೆಯಲಿದೆ.
ಈ ವರ್ಷ ಶಾ ಹಾಗೂ ಚಿತಾಲೆ ಅವರು ಟ್ಯುನಿಸ್‌ನಲ್ಲಿ ಡಬ್ಲ್ಯುಟಿಟಿ ಕಂಟೆಂಡರ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಬ್ರೆಝಿಲ್‌ನಲ್ಲಿ ಡಬ್ಲ್ಯುಟಿಟಿ ಸ್ಟಾರ್ ಕಂಟೆಂಡರ್ ಸ್ಪರ್ಧೆಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ.
2021ರಲ್ಲಿ ಮೊದಲ ಆವೃತ್ತಿಯ ಡಬ್ಲ್ಯುಟಿಟಿ ಫೈನಲ್ಸ್ ನಡೆದಿತ್ತು. ಮೊದಲ 4 ಆವೃತ್ತಿಗಳಂತೆ ಈ ವರ್ಷದ ಸ್ಪರ್ಧೆಯಲ್ಲಿ ಸಿಂಗಲ್ಸ್ ವಿಭಾಗದಲ್ಲಿ ಪುರುಷರ ಹಾಗೂ ಮಹಿಳೆಯರ ಸ್ಪರ್ಧೆಯಲ್ಲಿ ಅಗ್ರ-16 ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ.