×
Ad

ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್‌ನಿಂದ ಗಾಯಗೊಂಡು ನಿವೃತ್ತಿ ಘೋಷಿಸಿದ ಜೊಕೊವಿಕ್

Update: 2025-01-24 21:38 IST

ಜೊಕೊವಿಕ್ | PC : PTI  

ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ಫೈನಲ್‌ ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಹಾಲಿ ಚಾಂಪಿಯನ್ ಇಟಲಿಯ ಜನ್ನಿಕ್ ಸಿನ್ನರ್‌ರನ್ನು ಎದುರಿಸಲಿದ್ದಾರೆ. ಫೈನಲ್ ಪಂದ್ಯವು ರವಿವಾರ ನಡೆಯಲಿದೆ.

ಶುಕ್ರವಾರ ನಡೆದ ಮೊದಲ ಪುರುಷರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಅರ್ಧದಲ್ಲೇ ಗಾಯಗೊಂಡು ನಿವೃತ್ತಿಯಾಗುವುದರೊಂದಿಗೆ ಸರ್ಬಿಯದ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಹಾಗಾಗಿ, ಅವರ ಎದುರಾಳಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ಫೈನಲ್ ತಲುಪಿದ್ದಾರೆ.

ಇದರೊಂದಿಗೆ ದಾಖಲೆಯ 25ನೇ ಗ್ರ್ಯಾಮ್ ಸ್ಲಾಮ್ ಗಳಿಸುವ ಜೊಕೊವಿಕ್‌ರ ಆಸೆಗೆ ತಣ್ಣೀರು ಬಿದ್ದಿದೆ.

ಬಳಿಕ ನಡೆದ ಪುರುಷರ ಸಿಂಗಲ್ಸ್ ಎರಡನೇ ಸೆಮಿಫೈನಲ್‌ನಲ್ಲಿ, ಹಾಲಿ ಚಾಂಪಿಯನ್ ಇಟಲಿಯ ಜನ್ನಿಕ್ ಸಿನ್ನರ್ ಅಮೆರಿಕದ ಬೆನ್ ಶೆಲ್ಟನ್‌ರನ್ನು ಸೋಲಿಸಿ ಫೈನಲ್ ತಲುಪಿದ್ದಾರೆ.

ಫೈನಲ್‌ನಲ್ಲಿ ಅಗ್ರ ಮತ್ತು ದ್ವಿತೀಯ ಶ್ರೇಯಾಂಕದ ಆಟಗಾರರು ಮುಖಾಮುಖಿಯಾಗುತ್ತಿದ್ದಾರೆ.

ಮೊದಲ ಸೆಮಿಫೈನಲ್‌ನಲ್ಲಿ, ಪಂದ್ಯದ ಮೊದಲ ಸೆಟ್ಟನ್ನು ಝ್ವೆರೆವ್ 7-6ರಿಂದ ಗೆದ್ದರು. ಆಗ ಜೊಕೊವಿಕ್ ನೆಟ್‌ಗೆ ಹೋಗಿ ತನ್ನ ಎದುರಾಳಿಯ ಕೈಕುಲುಕಿ ಪಂದ್ಯದಿಂದ ನಿವೃತ್ತಿಯಾಗುವ ತನ್ನ ನಿರ್ಧಾರವನ್ನು ಅವರಿಗೆ ತಿಳಿಸಿದರು.

ಕಾರ್ಲೋಸ್ ಅಲ್ಕರಾಝ್ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಗಾಯಗೊಂಡಿದ್ದರು. ಆ ಗಾಯದಿಂದ ಅವರಿನ್ನೂ ಚೇತರಿಸಿಕೊಂಡಿಲ್ಲ ಎನ್ನಲಾಗಿದೆ. ಸೆಮಿಫೈನಲ್‌ನಲ್ಲಿ ಅವರಿಗೆ ಸಂಪೂರ್ಣ ಲಹರಿಯಿಂದ ಆಡಲು ಸಾಧ್ಯವಾಗಲಿಲ್ಲ. ಮೊದಲ ಸೆಟ್‌ನಲ್ಲಿ ಅವರನ್ನು ಸುದೀರ್ಘ ರ್ಯಾಲಿಗಳಲ್ಲಿ ಹಿಡಿದಿಡುವಲ್ಲಿ ಝ್ವೆರೆವ್ ಯಶಸ್ವಿಯಾಗಿದ್ದರು.

ಇದರೊಂದಿಗೆ ಝ್ವೆರೆವ್ ತನ್ನ ಮೊದಲ ಆಸ್ಟ್ರೇಲಿಯನ್ ಓಪನ್ ಫೈನಲ್ ತಲುಪಿದ್ದಾರೆ.

ಜೊಕೊವಿಕ್ ಕಳೆದ ಐದು ಗ್ರ್ಯಾನ್ ಸ್ಲಾಮ್‌ಗಳಲ್ಲಿ ಆಡಿದರೂ ಒಂದರಲ್ಲೂ ಪ್ರಶಸ್ತಿ ಗೆದ್ದಿಲ್ಲ. 2024ರಲ್ಲಿ ಅವರಿಗೆ ಒಂದೂ ಗ್ರ್ಯಾನ್ ಸ್ಲಾಮ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ವರ್ಷವೊಂದರಲ್ಲಿ ಒಂದೇ ಒಂದು ಪ್ರಶಸ್ತಿಯ್ನನ್ನು ಗೆಲ್ಲಲು ಅವರಿಗೆ ಸಾಧ್ಯವಾಗದಿರುವುದು ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಯಾಗಿದೆ. ಅವರ ಕೊನೆಯ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ 2023ರ ಯುಎಸ್ ಓಪನ್ ಪ್ರಶಸ್ತಿ ಆಗಿತ್ತು.

ಜರ್ಮನಿಯ ಝ್ವೆರೆವ್ ಇದಕ್ಕೂ ಮುನ್ನ ಎರಡು ಬಾರಿ ಗ್ರ್ಯಾನ್ ಸ್ಲಾಮ್ ರನ್ನರ್-ಅಪ್ ಆಗಿದ್ದಾರೆ- ಕಳೆದ ವರ್ಷದ ಫ್ರೆಂಚ್ ಓಪನ್ ಮತ್ತು 2020ರ ಯುಎಸ್ ಓಪನ್. ಆದರೆ, ಆಸ್ಟ್ರೇಲಿಯನ್ ಓಪನ್‌ನಲ್ಲಿ ಅವರು ಫೈನಲ್ ತಲುಪಿರುವುದು ಇದೇ ಮೊದಲ ಬಾರಿಯಾಗಿದೆ. ಕಳೆದ ವರ್ಷ ಅವರು ಐದು ಸೆಟ್‌ಗಳ ಸುದೀರ್ಘ ಸೆಮಿಫೈನಲ್‌ನಲ್ಲಿ ರಶ್ಯದ ಡನೀಲ್ ಮೆಡ್ವೆಡೆವ್ ವಿರುದ್ಧ ಸೋಲನುಭವಿಸಿದ್ದರು.

*ಜೊಕೊವಿಕ್‌ರನ್ನು ಅಣಕಿಸಿದ ಪ್ರೇಕ್ಷಕರು | ರಕ್ಷಣೆಗೆ ಧಾವಿಸಿದ ಝ್ವೆರೆವ್

ಶುಕ್ರವಾರ ನಡೆದ ಆಸ್ಟ್ರೇಲಿಯನ್ ಓಪನ್ ಮೊದಲ ಸೆಮಿಫೈನಲ್‌ನಲ್ಲಿ ಗಾಯಗೊಂಡು ನಿವೃತ್ತಿಯಾದ ನೊವಾಕ್ ಜೊಕೊವಿಕ್‌ರನ್ನು ಮೆಲ್ಬರ್ನ್‌ನ ರಾಡ್ ಲ್ಯಾವರ್ ಅರೀನಾ ಮೈದಾನದ ಒಂದು ವರ್ಗದ ಪ್ರೇಕ್ಷಕರು ‘‘ಬೂ....’’ ಎಂಬುದಾಗಿ ಸದ್ದು ಮಾಡುವ ಮೂಲಕ ಅಣಕಿಸಿದ್ದಾರೆ.

ಸ್ಪೇನ್‌ನ ಕಾರ್ಲೋಸ್ ಅಲ್ಕರಾಝ್ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜೊಕೊವಿಕ್ ಗಾಯಗೊಂಡಿದ್ದರು. ಅವರು ತನ್ನ ಎಡಗಾಲಿನ ಮೇಲ್ಭಾಗದಲ್ಲಿ ದಪ್ಪನೆಯ ಬ್ಯಾಂಡೇಜ್ ಸುತ್ತಿಕೊಂಡು ಸೆಮಿಫೈನಲ್ ಪಂದ್ಯಕ್ಕೆ ಬಂದಿದ್ದರು.

ಆದರೆ, ಪಂದ್ಯಾನಂತರದ ಪತ್ರಿಕಾಗೋಷ್ಠಿಯಲ್ಲಿ ಝ್ವೆರೆವ್, ಜೊಕೊವಿಕ್‌ರ ರಕ್ಷಣೆಗೆ ಧಾವಿಸಿದರು. ಗಾಯಗೊಂಡಿರುವ ಜೊಕೊವಿಕ್‌ರನ್ನು ಅಣಕಿಸಬೇಡಿ ಎಂಬುದಾಗಿ ಪ್ಷೇಕ್ಷಕರಿಗೆ ಮನವಿ ಮಾಡಿದರು.

‘‘ನಾನು ಹೇಳುವ ಮೊತ್ತ ಮೊದಲ ಮಾತೆಂದರೆ ಆಟಗಾರನೊಬ್ಬ ಗಾಯಗೊಂಡು ನಿವೃತ್ತಿಯಾಗುವಾಗ ಅವರನ್ನು ದಯವಿಟ್ಟು ಅಣಕಿಸಬೇಡಿ. ಪ್ರೇಕ್ಷಕರು ಹಣಕೊಟ್ಟು ಟಿಕೆಟ್ ಖರೀದಿಸಿದ್ದಾರೆ ಮತ್ತು ಅತ್ಯುತ್ತಮ ಐದು ಸೆಟ್‌ಗಳ ಪಂದ್ಯವೊಂದನ್ನು ನೋಡಲು ಬಯಸುತ್ತಾರೆ ಎನ್ನುವುದು ನನಗೆ ಗೊತ್ತು. ಆದರೆ, ನೊವಾಕ್ ಜೊಕೊವಿಕ್ ಕಳೆದ 20 ವರ್ಷಗಳಲ್ಲಿ ಈ ಕ್ರೀಡೆಗೆ ತನ್ನದೆಲ್ಲವನ್ನೂ ನೀಡಿದವರು ಎನ್ನುವುದನ್ನು ನೀವು ಅರ್ಥ ಮಾಡಿಕೊಳ್ಳಬೇಕು’’ ಎಂದು ಝ್ವೆರೆವ್ ಹೇಳಿದರು.

*ಜನ್ನಿಕ್ ಸಿನ್ನರ್ ಫೈನಲ್‌ಗೆ

ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ, ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ಎರಡನೇ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಇಟಲಿಯ ಜನ್ನಿಕ್ ಸಿನ್ನರ್ ಅಮೆರಿಕದ ಬೆನ್ ಶೆಲ್ಟನ್‌ರನ್ನು ಸೋಲಿಸಿ ಫೈನಲ್ ತಲುಪಿದ್ದಾರೆ. ಅವರು ರವಿವಾರ ನಡೆಯುವ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಎದುರಿಸಲಿದ್ದಾರೆ.

ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಸಿನ್ನರ್ ಎರಡನೇ ಶ್ರೇಯಾಂಕದ ತನ್ನ ಎದುರಾಳಿಯನ್ನು 7-6 (7/2), 6-2, 6-2 ಸೆಟ್‌ಗಳಿಂದ ಮಣಿಸಿದರು.

ಆರಂಭಿಕ ಸೆಟ್‌ನಲ್ಲಿ ಸಿನ್ನರ್ ತನ್ನ ಎದುರಾಳಿ ಶೆಲ್ಟನ್‌ರಿಂದ ತೀವ್ರ ಪ್ರತಿರೋಧವನ್ನು ಎದುರಿಸಿದರು. ಆ ಸೆಟ್ಟನ್ನು ಅವರು ಟೈಬ್ರೇಕರ್‌ನಲ್ಲಿ ಗೆದ್ದ ಬಳಿಕ ಮತ್ತೆ ಹಿಂದಿರುಗಿ ನೋಡಲಿಲ್ಲ. ಉಳಿದ ಎರಡು ಸೆಟ್‌ಗಳನ್ನು ಅವರು ಸುಲಲಿತವಾಗಿ ಜಯಿಸಿದರು. ಮೆಲ್ಬರ್ನ್‌ನ ರಾಡ್ ಲ್ಯಾವರ್ ಅರೀನಾದಲ್ಲಿ ನಡೆದ ಪಂದ್ಯವು 2 ಗಂಟೆ 36 ನಿಮಿಷಗಳವರೆಗೆ ಸಾಗಿತು.

ಇಟಲಿಯ ಆಟಗಾರನಿಗೆ ತನ್ನ ಮೊದಲ ಸೆಟ್‌ನಲ್ಲಿ ತನ್ನ ಅತ್ಯುತ್ತಮ ನಿರ್ವಹಣೆಯನ್ನು ನೀಡಲು ಸಾಧ್ಯವಾಗಲಿಲ್ಲ. ಗೇಮ್ 6-5ರಲ್ಲಿದ್ದಾಗ ಎರಡು ಸೆಟ್ ಪಾಯಿಂಟ್‌ಗಳನ್ನು ಉಳಿಸಿಕೊಳ್ಳಲು ಅವರು ತೀವ್ರ ಹೋರಾಟವನ್ನು ನೀಡಬೇಕಾಯಿತು. ಮೊದಲ ಸೆಟ್ 71 ನಿಮಿಷಗಳನ್ನು ತೆಗೆದುಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News