ಮಾದಕ ದ್ರವ್ಯ ಬಳಕೆ: ಕಾಗಿಸೊ ರಬಾಡ ತಾತ್ಕಾಲಿಕ ನಿಷೇಧ
ಕಾಗಿಸೊ ರಬಾಡ | PTI
ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ಹಾಗೂ ಗುಜರಾತ್ ಟೈಟಾನ್ಸ್ ತಂಡದ ವೇಗದ ಬೌಲರ್ ಕಾಗಿಸೊ ರಬಾಡರನ್ನು ಮಾದಕದ್ರವ್ಯ ಬಳಸಿದ ಆರೋಪದಲ್ಲಿ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಸ್ವತಃ ಕ್ರಿಕೆಟಿಗ ರಬಾಡ ಅವರು ಶನಿವಾರ ಹೇಳಿಕೆಯ ಮೂಲಕ ಇದನ್ನು ಖಚಿತಪಡಿಸಿದ್ದಾರೆ.
‘‘ನಾನು ಇತ್ತೀಚೆಗೆ ವೈಯಕ್ತಿಕ ಕಾರಣದಿಂದ ಐಪಿಎಲ್‌ನಿಂದ ದಕ್ಷಿಣ ಆಫ್ರಿಕಾಕ್ಕೆ ವಾಪಸಾಗಿದ್ದೇನೆ. ನಾನು ಮಾದಕ ದ್ರವ್ಯ ಬಳಸಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ವಾಪಸಾಗಿದ್ದೇನೆ’’ಎಂದು ರಬಾಡ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ನಾನು ಸಾಕಷ್ಟು ಬಾರಿ ತಾತ್ಕಾಲಿಕವಾಗಿ ಅಮಾನತುಗೊಂಡಿದ್ದೇನೆ. ನಾನು ಇಷ್ಟಪಡುವ ಕ್ರಿಕೆಟ್ ಆಡಲು ಮತ್ತೆ ಮರಳುವುದನ್ನು ಎದುರು ನೋಡುತ್ತಿರುವೆ. ನನಗೆ ಬೆಂಬಲ ನೀಡಿರುವ ನನ್ನ ಏಜೆಂಟ್, ಸಿಎಸ್‌ಎ ಹಾಗೂ ಗುಜರಾತ್ ಟೈಟಾನ್ಸ್‌ಗೆ ಧನ್ಯವಾದ ಹೇಳಲು ಬಯಸುವೆ. ಮಾರ್ಗದರ್ಶನ ನೀಡಿರುವ ನನ್ನ ಕಾನೂನು ತಂಡಕ್ಕೆ, ನನ್ನ ಸ್ನೇಹಿತರು ಹಾಗೂ ಕುಟುಂಬ ವರ್ಗಕ್ಕೆ ವಿಶೇಷವಾಗಿ ಧನ್ಯವಾದ ಹೇಳುವೆ’’ಎಂದು ರಬಾಡ ಹೇಳಿದರು.