×
Ad

ದುಲೀಪ್ ಟ್ರೋಫಿ ಫೈನಲ್ : ರಜತ್ ಪಾಟಿದಾರ್, ಯಶ್ ರಾಥೋಡ್ ಶತಕ

Update: 2025-09-12 22:20 IST

PC : PTI

ಬೆಂಗಳೂರು, ಸೆ.12: ಯಶ್ ರಾಥೋಡ್(ಬ್ಯಾಟಿಂಗ್ 137, 188 ಎಸೆತ, 11 ಬೌಂಡರಿ, 1 ಸಿಕ್ಸರ್)ಹಾಗೂ ರಜತ್ ಪಾಟಿದಾರ್(101 ರನ್, 115 ಎಸೆತ, 12 ಬೌಂಡರಿ, 2 ಸಿಕ್ಸರ್)ಶತಕಗಳ ಸಹಾಯದಿಂದ ಕೇಂದ್ರ ವಲಯ ತಂಡವು ದಕ್ಷಿಣ ವಲಯ ತಂಡದ ವಿರುದ್ಧದ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.

ಬಿಸಿಸಿಐನ ಸಿಒಇ ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದ 2ನೇ ದಿನದಾಟದಂತ್ಯಕ್ಕೆ 5 ವಿಕೆಟ್‌ಗಳ ನಷ್ಟಕ್ಕೆ 384 ರನ್ ಗಳಿಸಿರುವ ಕೇಂದ್ರ ವಲಯ ತಂಡವು 235 ರನ್ ಇನಿಂಗ್ಸ್ ಮುನ್ನಡೆಯಲ್ಲಿದೆ.

ರಾಥೋಡ್ ಹಾಗೂ ಪಾಟಿದಾರ್ 4ನೇ ವಿಕೆಟ್‌ಗೆ 167 ರನ್ ಜೊತೆಯಾಟ ನಡೆಸಿ ದಕ್ಷಿಣ ವಲಯದ ಬೌಲರ್‌ಗಳ ಬೆವರಿಳಿಸಿದರು.

2024-25ರ ರಣಜಿ ಟ್ರೋಫಿ ಋತುವಿನಲ್ಲಿ ಗರಿಷ್ಠ ರನ್ ಸ್ಕೋರರ್ ಆಗಿರುವ ವಿದರ್ಭದ ಬ್ಯಾಟರ್ ರಾಥೋಡ್ ಅವರು ಸ್ಪಿನ್ನರ್‌ಗಳಾದ ಅಂಕಿತ್ ಶರ್ಮಾ ಹಾಗೂ ರಿಕಿ ಭುಯ್ ಅವರನ್ನು ಕಾಡಿದರು. ಟೀ ವಿರಾಮದ ನಂತರ 132 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ ತನ್ನ 7ನೇ ಪ್ರಥಮ ದರ್ಜೆ ಶತಕ ಪೂರೈಸಿದರು.

ರಾಥೋಡ್ ಹಾಗೂ ಸಾರಾಂಶ್ ಜೈನ್(ಬ್ಯಾಟಿಂಗ್ 47)6ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 118 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ರಜತ್ ಪಾಟಿದಾರ್ ತನ್ನ ಶ್ರೇಷ್ಠ ಫಾರ್ಮ್ ಮುಂದುವರಿಸಿದರು. ನಾಯಕನಾಗಿ ತನ್ನ 15ನೇ ಪ್ರಥಮ ದರ್ಜೆ ಶತಕ ಗಳಿಸಿದರು. 112 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ಸಹಾಯದಿಂದ 100 ರನ್ ಪೂರೈಸಿದ ಪಾಟಿದಾರ್ ಅವರು ವೇಗಿಗಳಾದ ಗುರ್ಜಪ್‌ನೀತ್ ಸಿಂಗ್, ವಿ. ಕೌಶಿಕ್ ಹಾಗೂ ಎಂ.ಡಿ. ನಿದೀಶ್ ವಿರುದ್ಧ ಚೆನ್ನಾಗಿ ಆಡಿದರು.

ಪಾಟಿದಾರ್ ಅವರು 44 ರನ್ ಗಳಿಸಿದ್ದಾಗ ಜೀವದಾನ ಪಡೆದಿದ್ದರು. ಎಡಗೈ ಸ್ಪಿನ್ನರ್ ಅಂಕಿತ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಪಾಟಿದಾರ್ ಬಿದ್ದಿದ್ದರು. ಆದರೆ ಅಂಕಿತ್ ಅವರು ನೋ ಬಾಲ್ ಎಸೆದಿರುವುವುದು ರಿಪ್ಲೇಯಲ್ಲಿ ಗೊತ್ತಾಯಿತು.

ಏಕದಿನ ಶೈಲಿಯಲ್ಲಿ ಬ್ಯಾಟ್ ಬೀಸಿದ 32ರ ಹರೆಯದ ಪಾಟಿದಾರ್ ಕೊನೆಗೂ ಗುರ್ಜಪ್‌ನೀತ್ ಎಸೆದ ಬೌನ್ಸರ್‌ಗೆ ವಿಕೆಟ್ ಒಪ್ಪಿಸಿದರು.

ಆರಂಭಿಕ ಆಟಗಾರ ಅಕ್ಷಯ್ ವಾಡ್ಕರ್(22 ರನ್) ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಕೌಶಿಕ್ ದಿನದಾರಂಭದಲ್ಲಿ ದಕ್ಷಿಣ ವಲಯಕ್ಕೆ ವಿಶ್ವಾಸ ಮೂಡಿಸಿದ್ದರು. ವಾಡ್ಕರ್ ಅವರ ಜೊತೆಗಾರ ದಾನಿಶ್ ಮಾಲೆವಾರ್(53 ರನ್, 120 ಎಸೆತ, 5 ಬೌಂಡರಿ)ತನ್ನ ಉತ್ತಮ ಪ್ರದರ್ಶನ ಮುಂದುವರಿಸಿದ್ದಾರೆ. ಕಳೆದ ವರ್ಷ ಪ್ರಥಮ ದರ್ಜೆ ಕ್ರಿಕೆಟಿಗೆ ಕಾಲಿಟ್ಟಿರುವ 21ರ ಹರೆಯದ ದಾನಿಶ್ ಹೊಸ ಚೆಂಡಿನಲ್ಲಿ ದಿಟ್ಟ ಪ್ರದರ್ಶನ ನೀಡುತ್ತಿದ್ದಾರೆ. 113 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 50 ರನ್ ಪೂರ್ಣಗೊಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News