×
Ad

ಇಂಗ್ಲೆಂಡ್ 465 ರನ್‌ಗೆ ಆಲೌಟ್; ಭಾರತ ತಂಡಕ್ಕೆ ಅಲ್ಪ ಮುನ್ನಡೆ

Update: 2025-06-22 21:53 IST

PC : PTI 

ಲೀಡ್ಸ್: ಓಲಿ ಪೋಪ್ ಶತಕ, ಹ್ಯಾರಿ ಬ್ರೂಕ್ ಹಾಗೂ ಬೆನ್ ಡಕೆಟ್ ಅರ್ಧಶತಕಗಳ ಕೊಡುಗೆಯ ನೆರವಿನಿಂದ ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತ ತಂಡದ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 100.4 ಓವರ್‌ಗಳಲ್ಲಿ 465 ರನ್ ಗಳಿಸಿ ಆಲೌಟಾಗಿದೆ. ಶುಭಮನ್ ಗಿಲ್ ಬಳಗವು ಕೇವಲ 6 ರನ್ ಮುನ್ನಡೆ ಪಡೆಯುವಲ್ಲಿ ಶಕ್ತವಾಗಿದೆ. ಹಿರಿಯ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ(5-83) ಐದು ವಿಕೆಟ್ ಗೊಂಚಲು ಪಡೆದರು.

ವೇಗದ ಬೌಲರ್‌ಗಳಾದ ಪ್ರಸಿದ್ಧ ಕೃಷ್ಣ(3-128)ಹಾಗೂ ಮುಹಮ್ಮದ್ ಸಿರಾಜ್(2-122)ಇನ್ನುಳಿದ 5 ವಿಕೆಟ್‌ಗಳನ್ನು ಉರುಳಿಸಿದರೂ ದುಬಾರಿ ಬೌಲರ್ ಎನಿಸಿಕೊಂಡರು.

ಭಾರತದ ಮೊದಲ ಇನಿಂಗ್ಸ್ 471 ರನ್‌ಗೆ ಉತ್ತರವಾಗಿ ಇಂಗ್ಲೆಂಡ್ ತಂಡ 3ನೇ ದಿನದಾಟವಾದ ರವಿವಾರ ತನ್ನ ಮೊದಲ ಇನಿಂಗ್ಸ್‌ನ್ನು 3 ವಿಕೆಟ್‌ಗಳ ನಷ್ಟಕ್ಕೆ 209 ರನ್‌ನಿಂದ ಮುಂದುವರಿಸಿತು. ಪೋಪ್ ನಿನ್ನೆಯ ಮೊತ್ತಕ್ಕೆ ಕೇವಲ 6 ರನ್ ಸೇರಿಸಿ ಕನ್ನಡಿಗ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರು.

ತವರು ಮೈದಾನದಲ್ಲಿ ಸೊಗಸಾದ ಬ್ಯಾಟಿಂಗ್ ಮಾಡಿದ ಹ್ಯಾರಿ ಬ್ರೂಕ್(99 ರನ್, 112 ಎಸೆತ, 11 ಬೌಂಡರಿ, 2 ಸಿಕ್ಸರ್)ಕೇವಲ 1 ರನ್‌ನಿಂದ ಶತಕ ವಂಚಿತರಾಗಿ ಪ್ರಸಿದ್ಧ ಕೃಷ್ಣಗೆ ವಿಕೆಟ್ ಒಪ್ಪಿಸಿದರು. ಭಾರತದ ಎಲ್ಲ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದ ಬ್ರೂಕ್ ತನ್ನ 42ನೇ ಇನಿಂಗ್ಸ್‌ನಲ್ಲಿ 20ನೇ ಫಿಫ್ಟಿ ಪ್ಲಸ್ ಸ್ಕೋರ್ ಗಳಿಸಿದರು.

ಬ್ರೂಕ್ ಅವರು ಭಾರತ ತಂಡದ ವೇಗದ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿಯಾಗಿ ಆಡಿದರು. ಬುಮ್ರಾ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಆಡಿದರು. ಆದರೆ, ರವೀಂದ್ರ ಜಡೇಜರ ಸ್ಪಿನ್ ಬೌಲಿಂಗ್‌ನಲ್ಲಿ ಸವಾಲು ಎದುರಿಸಿದರು. ಬ್ರೂಕ್ ಒಟ್ಟು ಮೂರು ಬಾರಿ ಜೀವದಾನ ಪಡೆದರು. ಶನಿವಾರ ರನ್ ಖಾತೆ ತೆರೆಯುವ ಮೊದಲೇ ಬುಮ್ರಾ ಅವರ ನೋ-ಬಾಲ್ ಎಸೆತದಿಂದಾಗಿ ಜೀವದಾನ ಪಡೆದಿದ್ದ ಬ್ರೂಕ್ ರವಿವಾರ 46 ರನ್ ಗಳಿಸಿದ್ದಾಗ ರವೀಂದ್ರ ಜಡೇಜ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ರಿಷಭ್ ಪಂತ್ ಕ್ಯಾಚ್ ಬಿಟ್ಟರು. ಯಶಸ್ವಿ ಜೈಸ್ವಾಲ್ ಸುಲಭ ಕ್ಯಾಚ್ ಕೈಬಿಟ್ಟರು.

ಪೋಪ್ ಔಟಾದ ನಂತರ ಬಂದ ನಾಯಕ ಬೆನ್ ಸ್ಟೋಕ್ಸ್ ಒಂದು ಗಂಟೆ ಕಾಲ ಕ್ರೀಸ್‌ನಲ್ಲಿದ್ದರು. 20 ರನ್ ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸುವ ಮೊದಲು ಬ್ರೂಕ್ ಜೊತೆ 51 ರನ್ ಸೇರಿಸಿದರು.

ವಿಕೆಟ್‌ಕೀಪರ್ ಜೆಮೀ ಸ್ಮಿತ್(40 ರನ್, 52 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಬ್ರೂಕ್ 6ನೇ ವಿಕೆಟ್ ಜೊತೆಯಾಟದಲ್ಲಿ 88 ಎಸೆತಗಳಲ್ಲಿ 73 ರನ್ ಸೇರಿಸಿ ಬಿರುಸಿನ ಬ್ಯಾಟಿಂಗ್ ಮಾಡಿದರು. ಸ್ಮಿತ್ ಔಟಾದ ನಂತರ ಕ್ರಿಸ್ ವೋಕ್ಸ್ (38 ರನ್, 55 ಎಸೆತ) ಜೊತೆಗೂಡಿದ ಬ್ರೂಕ್ 7ನೇ ವಿಕೆಟ್‌ಗೆ 48 ಎಸೆತಗಳಲ್ಲಿ 49 ರನ್ ಸೇರಿಸಿದರು.

ಆಲ್‌ರೌಂಡರ್ ವೋಕ್ಸ್ ಹಾಗೂ ಬ್ರೆಂಡನ್ ಕಾರ್ಸ್(22 ರನ್, 23 ಎಸೆತ) 8ನೇ ವಿಕೆಟ್‌ನಲ್ಲಿ ಕೇವಲ 44 ಎಸೆತಗಳಲ್ಲಿ 55 ರನ್ ಜೊತೆಯಾಟ ನಡೆಸಿ ಇಂಗ್ಲೆಂಡ್ ಸ್ಕೋರನ್ನು 450 ಗಡಿ ದಾಟಿಸಿದರು.

ಪ್ರಸಿದ್ದ ಕೃಷ್ಣ ಬೌಲಿಂಗ್‌ನಲ್ಲಿ ಸತತ ಸಿಕ್ಸರ್ ಸಿಡಿಸಿದ ವೋಕ್ಸ್ 2,000 ಟೆಸ್ಟ್ ರನ್ ಪೂರೈಸಿದರು.

ವೋಕ್ಸ್ ಹಾಗೂ ಜೋಶ್ ಟಂಗ್(11 ರನ್, 18 ಎಸೆತ) ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಬುಮ್ರಾ ಇಂಗ್ಲೆಂಡ್ ಇನಿಂಗ್ಸ್‌ಗೆ ತೆರೆ ಎಳೆದರು. ಮಾತ್ರವಲ್ಲ ಇಂಗ್ಲೆಂಡ್ ನೆಲದಲ್ಲಿ ತನ್ನ 3ನೇ ಐದು ವಿಕೆಟ್ ಗೊಂಚಲು ಪಡೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News