ಮೂವರು ಬ್ಯಾಟರ್ ಗಳು ಶೂನ್ಯಕ್ಕೆ ಔಟ್: 2010ರ ಪ್ರದರ್ಶನ ಪುನರಾವರ್ತಿಸಿದ ಇಂಗ್ಲೆಂಡ್
ಬೆನ್ ಸ್ಟೋಕ್ಸ್ | PC : X
ಬರ್ಮಿಂಗ್ ಹ್ಯಾಮ್: ಭಾರತ ಕ್ರಿಕೆಟ್ ತಂಡವು 2ನೇ ಟೆಸ್ಟ್ ಪಂದ್ಯದ 3ನೇ ದಿನದಾಟವಾದ ಶುಕ್ರವಾರ ಬೆಳಗ್ಗೆ ತನ್ನ ಹಿಡಿತ ಬಿಗಿಗೊಳಿಸಿತು. ಅಮೋಘ ಸ್ಪೆಲ್ ಎಸೆದ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಅವರು ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ವಿಕೆಟ್‌ಗಳನ್ನು ಸತತ ಎಸೆತಗಳಲ್ಲಿ ಉರುಳಿಸಿ ಆತಿಥೇಯರ ಸಂಕಷ್ಟ ಹೆಚ್ಚಿಸಿದರು.
ನಾಯಕ ಸ್ಟೋಕ್ಸ್ ಅವರು ಇಂದು ಶೂನ್ಯ ಸಂಪಾದಿಸಿದರು. ರೂಟ್ ಅವರು ಸಿರಾಜ್‌ಗೆ ವಿಕೆಟ್ ಒಪ್ಪಿಸುವ ಮೊದಲು ಕೇವಲ 22 ರನ್ ಗಳಿಸಿದರು. ಈ ಇಬ್ಬರು ಆಟಗಾರರ ನಿರ್ಗಮನದಿಂದಾಗಿ ಇಂಗ್ಲೆಂಡ್ ತಂಡವು ಅನಪೇಕ್ಷಿತ ದಾಖಲೆ ನಿರ್ಮಿಸಿತು. ಸ್ಟೋಕ್ಸ್, ಬೆನ್ ಡಕೆಟ್ ಹಾಗೂ ಓಲಿ ಪೋಪ್ ಈ ಮೂವರು ಶೂನ್ಯಕ್ಕೆ ಔಟಾಗಿದ್ದಾರೆ.
ಸ್ವದೇಶದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 25 ವರ್ಷಗಳಲ್ಲಿ 2ನೇ ಬಾರಿ ಇಂಗ್ಲೆಂಡ್‌ನ ಅಗ್ರ-6 ಬ್ಯಾಟರ್‌ಗಳ ಪೈಕಿ ಮೂವರು ಒಂದೂ ರನ್ ಗಳಿಸದೆ ಔಟಾಗಿದ್ದಾರೆ. 2010ರಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಇದೇ ರೀತಿಯ ಪರಿಸ್ಥಿತಿ ಎದುರಿಸಿತ್ತು. ಆದರೆ ಆ ಪಂದ್ಯವನ್ನು ಇಂಗ್ಲೆಂಡ್ ತಂಡವು ಇನಿಂಗ್ಸ್ ಹಾಗೂ 225 ರನ್‌ಗಳಿಂದ ಗೆದ್ದುಕೊಂಡಿತ್ತು.