×
Ad

2ನೇ ಟೆಸ್ಟ್: ಇಂಗ್ಲೆಂಡ್ ತಂಡ ಮರು ಹೋರಾಟ

Update: 2025-07-04 21:23 IST

PC: x \ @weRcricket

ಬರ್ಮಿಂಗ್‌ ಹ್ಯಾಮ್: ಜೆಮೀ ಸ್ಮಿತ್( ಔಟಾಗದೆ 157) ಹಾಗೂ ಹ್ಯಾರಿ ಬ್ರೂಕ್ (ಔಟಾಗದೆ 140) ಅವರ ಶತಕದ ನೆರವಿನಿಂದ ಆತಿಥೇಯ ಇಂಗ್ಲೆಂಡ್ ಕ್ರಿಕೆಟ್ ತಂಡ ಭಾರತ ತಂಡದ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ 3ನೇ ದಿನದಾಟವಾದ ಶುಕ್ರವಾರ ಮರು ಹೋರಾಟ ನೀಡುತ್ತಿದೆ.

ಶುಭಮನ್ ಗಿಲ್ ದ್ವಿಶತಕದ(269 ರನ್)ಬಲದಿಂದ ಭಾರತ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ 567 ರನ್ ಗಳಿಸಿತ್ತು. 3 ವಿಕೆಟ್‌ಗಳ ನಷ್ಟಕ್ಕೆ 77 ರನ್‌ನಿಂದ 3ನೇ ದಿನದಾಟದ ಆರಂಭದಲ್ಲೇ ಒತ್ತಡದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ಮುಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದರು. ದಿನದಾಟದ 2ನೇ ಓವರ್‌ನಲ್ಲಿ ಸತತ ಎಸೆತಗಳಲ್ಲಿ ರೂಟ್(22 ರನ್)ಹಾಗೂ ಬೆನ್ ಸ್ಟೋಕ್ಸ್(0)ವಿಕೆಟ್‌ಗಳನ್ನು ಉರುಳಿಸಿ ಭಾರತದ ಪಾಳಯದಲ್ಲಿ ಸಂತಸ ಮೂಡಿಸಿದರು.

84 ರನ್‌ಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡವು ಬೇಗನೆ ಆಲೌಟ್ ಆಗುವ ಅಪಾಯದಲ್ಲಿತ್ತು. ಭಾರತವು ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿತ್ತು. ಆದರೆ ಯುವ ವಿಕೆಟ್‌ಕೀಪರ್ ಸ್ಮಿತ್ ಅವರು ಔಟಾಗದೆ 30 ರನ್ ಗಳಿಸಿ ಅದಾಗಲೇ ಕ್ರೀಸ್‌ನಲ್ಲಿ ಬೇರುಬಿಟ್ಟಿದ್ದ ಬೂಕ್ ಜೊತೆಗೂಡಿ ಪಂದ್ಯದ ಚಿತ್ರಣ ಬದಲಿಸಿದರು. ಸಿರಾಜ್‌ಗೆ ಹ್ಯಾಟ್ರಿಕ್ ವಿಕೆಟ್ ನಿರಾಕರಿಸಿದ ಸ್ಮಿತ್ ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಲಾರಂಭಿಸಿದರು. ಆನಂತರ ಅವರು ಹಿಂತಿರುಗಿ ನೋಡಲಿಲ್ಲ.

ಭಾರತದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಸ್ಮಿತ್ ಕೇವಲ 80 ಎಸೆತಗಳಲ್ಲಿ ತನ್ನ 2ನೇ ಟೆಸ್ಟ್ ಶತಕವನ್ನು ಪೂರೈಸಿದರು. ಮತ್ತೊಂದೆಡೆ ಹ್ಯಾರಿ ಬ್ರೂಕ್ ಅವರು ಸ್ಮಿತ್‌ಗೆ ಉತ್ತಮ ಸಾಥ್ ನೀಡಿದರು. ಬ್ರೂಕ್ ಕೂಡ 137 ಎಸೆತಗಳಲ್ಲಿ 12 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ತನ್ನ 9ನೇ ಶತಕ ಪೂರೈಸಿದರು. ಈ ಇಬ್ಬರು ಟೀ ವಿರಾಮದ ವೇಳೆಗೆ 6ನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 271 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ತಂಡ ಭಾರತದ ಇನಿಂಗ್ಸ್‌ಗಿಂತ 232 ರನ್ ಹಿನ್ನಡೆಯಲ್ಲಿದೆ.

ಸ್ಮಿತ್-ಬ್ರೂಕ್ ಜೋಡಿಯನ್ನು ಬೇರ್ಪಡಿಸಲು ಭಾರತವು ಹರಸಾಹಸ ಪಡುತ್ತಿದೆ.

ಭಾರತದ ಬೌಲಿಂಗ್ ವಿಭಾಗದಲ್ಲಿ ಮುಹಮ್ಮದ್ ಸಿರಾಜ್(3-57)ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಆಕಾಶ್ ದೀಪ್(2-70) ಎರಡು ವಿಕೆಟ್ ಪಡೆದಿದ್ದಾರೆ.

*ಪ್ರಸಿದ್ಧ ಕೃಷ್ಣ ದುಬಾರಿ ಬೌಲರ್

ಪ್ರಸಿದ್ಧ ಕೃಷ್ಣ ಅವರು ಒಂದೇ ಓವರ್‌ನಲ್ಲಿ 23 ರನ್ ಬಿಟ್ಟುಕೊಟ್ಟು ಅನಪೇಕ್ಷಿತ ದಾಖಲೆ ನಿರ್ಮಿಸಿದರು. ಕೃಷ್ಣ ಮೇಲೆ ಮುಗಿಬಿದ್ದ ಬ್ರೂಕ್ 4 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು.

ಕೃಷ್ಣ ಅವರು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕನಿಷ್ಠ 500 ಎಸೆತಗಳಲ್ಲಿ ಕಳಪೆ ಇಕಾನಮಿ ರೇಟ್ ದಾಖಲಿಸಿದರು. ಮೊದಲ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನಲ್ಲಿ 128 ರನ್ ಬಿಟ್ಟುಕೊಟ್ಟಿದ್ದ ಕೃಷ್ಣ ಅವರು 6.40ರ ಇಕಾನಮಿ ರೇಟ್‌ನಲ್ಲಿ 3 ವಿಕೆಟ್ ಪಡೆದಿದ್ದರು. 2ನೇ ಇನಿಂಗ್ಸ್‌ನಲ್ಲಿ 6.13ರ ಇಕಾನಮಿ ರೇಟ್‌ನಲ್ಲಿ 92 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದಿದ್ದರು.

3ನೇ ದಿನದಾಟದಲ್ಲಿ ಒಂದು ಹಂತದಲ್ಲಿ 5 ಓವರ್‌ಗಳಲ್ಲಿ 50 ರನ್ ನೀಡಿ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ತನ್ನ ಅಲ್ಪ ಅವಧಿಯ ಟೆಸ್ಟ್ ವೃತ್ತಿಜೀವನದಲ್ಲಿ ಪ್ರತೀ ಓವರ್‌ ಗೆ 5 ರನ್ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News