ಆ್ಯಷಸ್ ಬಳಿಕ ನಿವೃತ್ತಿ ನಿರ್ಧಾರ ಘೋಷಿಸಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್
ಆ್ಯಷಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದ 3ನೇ ದಿನ ಆಟದ ಕೊನೆಗೆ ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಪ್ರಕಟಿಸಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವೃತ್ತಿ ಜೀವನದ ಕಟ್ಟಕಡೆಯ ಸರಣಿ ಹಾಗೂ ಪಂದ್ಯ ಇದಾಗಿದೆ ಎಂದು ಸ್ಪಷ್ಟಪಡಿಸಿದರು.
"ನಾಳೆ-ಸೋಮವಾರ- ನನ್ನ ಕೊನೆಯ ಕ್ರಿಕೆಟ್ ಪಂದ್ಯ. ಸಾಕಷ್ಟು ಕಾಲ ನಾಟಿಂಗ್‍ಹ್ಯಾಂಶೈರ್ ಮತ್ತು ಇಂಗ್ಲೆಂಡ್‍ನ ಬ್ಯಾಡ್ಜ್ ಧರಿಸಿ ಇದು ಅದ್ಭುತ ಸವಾರಿ, ದೊಡ್ಡ ಗೌರವ. ಕ್ರಿಕೆಟನ್ನು ನಾನು ಈ ಹಿಂದೆ ಎಂದಿಗಿಂತಲೂ ಹೆಚ್ಚು ಪ್ರೀತಿಸಿದ್ದೇನೆ. ಇದು ನಾನು ಭಾಗವಹಿಸಿದ ಅದ್ಭುತ ಸರಣಿ. ಇದನ್ನು ಅಗ್ರಶ್ರೇಣಿಯಲ್ಲಿ ಮುಗಿಸಲು ನಾನು ಸದಾ ಬಯಸುತ್ತೇನೆ. ಈ ಸರಣಿ ನಾನು ಪಾಲ್ಗೊಂಡ ಅತ್ಯಂತ ಆಸ್ವಾದನೀಯ ಮತ್ತು ಮನೋರಂಜನೀಯ ಸರಣಿ ಎಂಬ ಭಾವನೆ ನನ್ನದು" ಎಂದು ಸ್ಕೈ ಕ್ರಿಕೆಟ್ ಜತೆ ಮಾತನಾಡಿದ ಬ್ರಾಡ್ ವಿವರಿಸಿದರು.
"ನಿನ್ನೆ ರಾತ್ರಿ 8.30ಕ್ಕೆ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಕೆಲ ವಾರಗಳಿಂದ ನಾನು ಈ ಬಗ್ಗೆ ಯೋಚಿಸುತ್ತಿದ್ದೆ. ಆದರೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯ ಸದಾ ನನಗೆ ಶಿಖರಪ್ರಾಯ. ನಾನು ವೈಯಕ್ತಿಕವಾಗಿ ಹಾಗೂ ತಂಡವಾಗಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಪ್ರೀತಿಸುತ್ತೇನೆ" ಎಂದು ಬಣ್ಣಿಸಿದರು.
2007ರ ಡಿಸೆಂಬರ್‍ನಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ಬ್ರಾಡ್, 167 ಟೆಸ್ಟ್‍ಗಳನ್ನು ಆಡಿದ್ದಾರೆ. ಇತ್ತೀಚೆಗೆ ಅವರು ಟೆಸ್ಟ್ ಕ್ರಿಕೆಟ್‍ನಲ್ಲಿ 600 ವಿಕೆಟ್ ಗಳಿಸಿದ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದರು. ವಿಶ್ವದಲ್ಲಿ ಅತ್ಯಧಿಕ ವಿಕೆಟ್ ಪಡೆದವರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಜತೆಗೆ 600 ವಿಕೆಟ್ ಗಳಿಸಿದ ಇಬ್ಬರು ವೇಗದ ಬೌಲರ್‍ಗಳ ಪೈಕಿ ಇವರೂ ಒಬ್ಬರು. ಜಿಮ್ಮಿ ಆಂಡರ್ಸ್‍ಸನ್ ಕೂಡಾ ಈ ಸಾಧನೆ ಮಾಡಿದ್ದಾರೆ.
ಇವರು 121 ಏಕದಿನ ಪಂದ್ಯ ಹಾಗೂ 56 ಟಿ-20 ಪಂದ್ಯಗಳನ್ನು ಆಡಿದ್ದಾರೆ.