ಎಫ್ಐಎಚ್ ಪ್ರೊ ಲೀಗ್: ಪೆನಾಲ್ಟಿ ಶೂಟೌಟ್ ನಲ್ಲಿ ಸ್ಪೇನ್ ಗೆ ಸೋಲುಣಿಸಿದ ಭಾರತ
Photo: X
ಭುವನೇಶ್ವರ: ಅನುಭವಿ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಅವರ ಅಮೋಘ ಪ್ರದರ್ಶನದ ನೆರವಿನಿಂದ ಭಾರತದ ಪುರುಷರ ಹಾಕಿ ತಂಡವು ಸೋಮವಾರ ಎಫ್ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಪೆನಾಲ್ಟಿ ಶೂಟೌಟ್ ಮೂಲಕ ಮಣಿಸಿದೆ.
ನಿಗದಿತ ಸಮಯದಲ್ಲಿ ಉಭಯ ತಂಡಗಳು 2-2ರಿಂದ ಸಮಬಲ ಸಾಧಿಸಿದವು. ಜರ್ಮನ್ಪ್ರೀತ್ ಸಿಂಗ್(1ನೇ ನಿಮಿಷ) ಹಾಗೂ ಅಭಿಷೇಕ್(35ನೇ ನಿಮಿಷ)ಭಾರತದ ಪರ ತಲಾ ಒಂದು ಗೋಲು ಗಳಿಸಿದರು. ಸ್ಪೇನ್ ಪರ ಜೋಸ್ ಬಾಸ್ಟೆರ್ರಾ(3ನೇ ನಿಮಿಷ) ಹಾಗೂ ಬೊರ್ಜಾ ಲಕಾಲೆ(15ನೇ ನಿಮಿಷ)ತಲಾ ಒಂದು ಗೋಲು ದಾಖಲಿಸಿದರು.
ಪೆನಾಲ್ಟಿ ಶೂಟೌಟ್ ರೋಚಕವಾಗಿ ಸಾಗಿದ್ದು ಲಲಿತ್ ಉಪಾಧ್ಯಾಯ ಭಾರತಕ್ಕೆ ಮುನ್ನಡೆ ಒದಗಿಸಿಕೊಡುವ ಮೊದಲು ಉಭಯ ತಂಡಗಳು 7-7ರಿಂದ ಸಮಬಲ ಸಾಧಿಸಿದವು. ಭಾರತದ ಗೋಲ್ಕೀಪರ್ ಶ್ರೀಜೇಶ್ ಸ್ಪೇನ್ ನಾಯಕ ಮಾರ್ಕ್ ಮಿರಾಲ್ಲಿಸ್ಗೆ ಗೋಲನ್ನು ನಿರಾಕರಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದರು. ಈ ಮೂಲಕ ಆತಿಥೇಯ ತಂಡ ಗೆಲುವು ತನ್ನದಾಗಿಸಿಕೊಂಡಿತು.
ಭಾರತದ ಹಾಕಿ ತಂಡವು ಬುಧವಾರ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ.