ಪ್ರಜ್ಞಾನಂದ್ ಗೆ ಮೊದಲ ಸೋಲು; ಗುಕೇಶ್ ಅಗ್ರಸ್ಥಾನಿ
PC: x.com/IExpressSports
ಹೊಸದಿಲ್ಲಿ: ಟಾಟಾ ಸ್ಟೀಲ್ ಚೆಸ್ ಟೂರ್ನಿಯ ವಿರಾಮದ ದಿನದ ಬಳಿಕ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ದೊಮ್ಮರಾಜು ಎದುರಾಳಿ ಲಿಯೋನ್ ಲ್ಯೂಕ್ ಮೆಂಡೋನ್ಸಾ ಅವರನ್ನು 43 ನಡೆಗಳ ಆಟದಲ್ಲಿ ಮಣಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.
ಕಳೆದ ವರ್ಷ ನಡದ ಟಾಟಾ ಸ್ಟೀಲ್ ಚೆಸ್ ಟೂರ್ನಿಯ 86ನೇ ಆವೃತ್ತಿಯಲ್ಲಿ ಚಾಲೆಂಜರ್ಸ್ ವಿಭಾಗದ ಪ್ರಶಸ್ತಿ ಗೆಲ್ಲುವ ಮೂಲಕ ಮಾಸ್ಟರ್ಸ್ ವಿಭಾಗಕ್ಕೆ ಅರ್ಹತೆ ಪಡೆದಿದ್ದ ಮಂಡೋನ್ಸಾ, ಪ್ರಸಕ್ತ ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ ಅವರಿಂದ ದೊಡ್ಡ ಸವಾಲು ಎದುರಾಗಿತ್ತು.
ಗುಕೇಶ್ ಅವರಿಗಿಂತಎರಡು ತಿಂಗಳು ಹಿರಿಯವರಾದ ಮೆಂಡೋನ್ಸಾ, ಈ ಟೂರ್ನಿಯಲ್ಲಿ ಆರೋಗ್ಯ ಸಮಸ್ಯೆಗಳ ಜತೆಯೂ ಹೋರಾಡುತ್ತಿದ್ದಾರೆ. ಇದಕ್ಕೂ ಮುನ್ನ ಪೆಂಟಾಲಾ ಹರಿಕೃಷ್ಣ ವಿರುದ್ಧದ ಮೂರನೇ ಸುತ್ತಿನ ಪಂದ್ಯಕ್ಕೆ ಮುನ್ನ ಅವರು ವೈದ್ಯರ ಸಲಹೆ ಪಡೆದಿದ್ದರು. ಮಂಗಳವಾರ ಮಾರ್ಫಿ ಡಿಫೆನ್ಸ್ ಶೈಲಿಗೆ ಮೊರೆಹೋದ ಅವರು, ರೂಯಿ ಲೋಪೆಝ್ ಆರಂಭವನ್ನು ಆಯ್ಕೆ ಮಾಡಿಕೊಂಡರು. 30ನೇ ನಡೆಯವರೆಗೂ ಸಮಬಲದ ಹೋರಾಟ ಮುಂದುವರಿಯಿತು. 31ನೇ ನಡೆಯಲ್ಲಿ ಮೆಂಡೋನ್ಸಾ ಎಸಗಿದ ಪ್ರಮಾದದ ಲಾಭ ಪಡೆದ ಗುಕೇಶ್ ಎದುರಾಳಿಯ ವಿರುದ್ಧ ಮೇಲುಗೈ ಸಾಧಿಸಿದರು.
ಈ ಗೆಲುವಿನೊಂದಿಗೆ 6.5 ಅಂಕ ಹೊಂದಿರುವ ಗುಕೇಶ್ ತಮ್ಮ ಮುನ್ನಡೆ ಹಿಗ್ಗಿಸಿಕೊಂಡು ಟೂರ್ನಿಯಲ್ಲಿ ಅಗ್ರಸ್ಥಾನದಲ್ಲಿರುವ ಏಕೈಕ ಆಟಗಾರನಾಗಿ ಹೊರಹೊಮ್ಮಿದರು. ಜಂಟಿ ಅಗ್ರಸ್ಥಾನಿಯಾಗಿದ್ದ ನೊದಿರ್ಬೆಕ್ ಅವರು ಫ್ಯಾಬಿಯಾನೊ ಕರೂನಾ ವಿರುದ್ಧ ಡ್ರಾ ಮಾಡಿಕೊಂಡರೆ, ಪ್ರಜ್ಞಾನಂದ ರಮೇಶ್ಬಾಬು ಅವರು ಹಾಲೆಂಡ್ ನ ನಂಬರ್ 1 ಆಟಗಾರ ಅನೀಶ್ ಗಿರಿ ವಿರುದ್ಧ ಸೋಲು ಅನುಭವಿಸಿದರು. ನೊದಿರ್ಬೆಕ್, ವ್ಲಾದಿಮಿರ್ ಫೆಡೊಸೀವ್ ತಲಾ 6 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪ್ರಜ್ಞಾನಂದ 5.5 ಅಂಕದೊಂದಿಗೆ ಮೂರನೇ ಸ್ಥಾನ ಹೊಂದಿದ್ದಾರೆ. ಚಾಲೆಂಜರ್ಸ್ ವಿಭಾಗದಲ್ಲಿ ಥಾಯ್ ದೈ ವಾನ್ ಗ್ಯುಯೆನ್ 6.5 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.