ಏಕದಿನ ಸರಣಿಯ ಮೊದಲ ಪಂದ್ಯ | ಆಸ್ಟ್ರೇಲಿಯ ‘ಎ’ಯನ್ನು 3 ವಿಕೆಟ್ ನಿಂದ ಸೋಲಿಸಿದ ಭಾರತ ‘ಎ’
ಬ್ರಿಸ್ಬೇನ್, ಆ. 13: ಪ್ರವಾಸಿ ಭಾರತ ‘ಎ’ ಮಹಿಳಾ ತಂಡವು ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಬುಧವಾರ ಆಸ್ಟ್ರೇಲಿಯ ತಂಡವನ್ನು ಮೂರು ವಿಕೆಟ್ ಗಳಿಂದ ಸೋಲಿಸಿದೆ. ಭಾರತ ‘ಎ’ ತಂಡವು ಎಲ್ಲಾ ಮೂರು ಟಿ20 ಪಂದ್ಯಗಳನ್ನು ಸೋತ ಬಳಿಕ ಈ ವಿಜಯವನ್ನು ಸಂಪಾದಿಸಿದೆ.
ಬ್ರಿಸ್ಬೇನ್‌ನ ಇಯಾನ್ ಹೀಲಿ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಟಹ್ಲಿಯಾ ಮೆಗ್ರಾ ನೇತೃತ್ವಬದ ಆಸ್ಟ್ರೇಲಿಯ ಎ ತಂಡವು ಮೊದಲು ಬ್ಯಾಟಿಂಗ್ ಮಾಡಿ 47.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 214 ರನ್ ಗಳಿಸಿತು. ಗೆಲ್ಲಲು 215 ರನ್ ಗಳ ಗುರಿಯನ್ನು ಪಡೆದ ಭಾರತ ಎ ಮಹಿಳಾ ತಂಡವು 42 ಓವರ್ ಗಳಲ್ಲೇ ಗುರಿಯನ್ನು ತಲುಪಿತು. ಆರಂಭಿಕ ಬ್ಯಾಟರ್ ಯಸ್ತಿಕಾ ಭಾಟಿಯ (59) ತಂಡವನ್ನು ವಿಜಯದತ್ತ ಮುನ್ನಡೆಸಿದರು ಮತ್ತು ಅವರಿಗೆ ಶಫಾಲಿ ವರ್ಮಾ (36) ಮತ್ತು ಧಾರಾ ಗುಜ್ಜರ್ (31) ಸಹಾಯ ಮಾಡಿದರು.
ಮಧ್ಯಮ ಓವರ್ ಗಳಲ್ಲಿ ಆಸ್ಟ್ರೇಲಿಯ ಎ ತೀವ್ರ ಪ್ರತಿ ಹೋರಾಟ ನೀಡಿದಾಗ ತಂಡವನ್ನು ವಿಜಯದತ್ತ ಮುನ್ನಡೆಸಿದ ರಘ್ವಿ ಬಿಶ್ತ್ 25 ರನ್ ಗಳಿಸಿ ಅಜೇಯವಾಗಿ ಉಳಿದರು.
ಇದಕ್ಕೂ ಮೊದಲು, ರಾಧಾ ಯಾದವ್ ಮೂರು ವಿಕೆಟ್ ಗಳನ್ನು ಗಳಿಸಿ ಆತಿಥೇಯ ತಂಡದ ರನ್ ಗಳಿಕೆಯನ್ನು ನಿಯಂತ್ರಿಸಿದರು. ಟೈಟಸ್ ಸದು ಮತ್ತು ಮಿನ್ನು ಮಣಿ ತಲಾ ಎರಡು ವಿಕೆಟ್ ಗಳನ್ನು ಉರುಳಿಸಿದರು. ಭಾರತದ ಬಿಗು ಬೌಲಿಂಗ್ ದಾಳಿಯಿಂದಾಗಿ ಆತಿಥೇಯರು 214 ರನ್ ಗಳಿಗೆ ಇನಿಂಗ್ಸ್ ಮುಗಿಸಿದರು.
ಅನಿಕಾ ಲೆರಾಯ್ಡ್ 92 ರನ್ ಗಳನ್ನು ಗಳಿಸಿ ಅಜೇಯವಾಗಿ ಉಳಿದರು. ಅವರು ಏಕಾಂಗಿಯಾಗಿ ತಂಡದ ಇನಿಂಗ್ಸ್ ಬೆಳೆಸಿದರಾದರೂ ಕೊನೆಯಲ್ಲಿ ಜೊತೆಗಾರರಿಲ್ಲದೇ ಹೋದರು.
ಅನಿಕಾಗೆ ರಚೆಲ್ ಟ್ರೆನಮನ್ (51) ಉತ್ತಮ ಬೆಂಬಲವನ್ನು ನೀಡಿದರು. ಆದರೆ ಅವರು ರನೌಟ್ ಆಗಿ ನಿರ್ಗಮಿಸಿದರು.
ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಎ ಈಗ 1-0 ಅಂತರದಿಂದ ಮುಂದಿದೆ.
ಆಗಸ್ಟ್ 15ರಂದು ಎರಡನೇ ಏಕದಿನ ಪಂದ್ಯ ಇದೇ ಮೈದಾನದಲ್ಲಿ ನಡೆಯಲಿದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಎ (47.5 ಓವರ್ ಗಳಲ್ಲಿ ಆಲೌಟ್) 214
ರಚೆಲ್ ಟ್ರೆನಮನ್ 51, ಅನಿಕಾ ಲೆರಾಯ್ಡ್ (ಅಜೇಯ) 92, ನಿಕೋಲ್ ಫ್ಯಾಲ್ಟಮ್ 18
ಟೈಟಸ್ ಸದು 2-37, ರಾಧಾ ಯಾದವ್ 3-45, ಮಿನ್ನು ಮಣಿ 2-38
ಭಾರತ ಎ (42 ಓವರ್ ಗಳಲ್ಲಿ) 215-7
ಯಸ್ತಿಕಾ ಭಾಟಿಯ 59, ಶಫಾಲಿ ವರ್ಮಾ 36, ಧಾರಾ ಗುಜ್ಜರ್ 31, ರಘ್ವಿ ಬಿಸ್ತ್ (ಅಜೇಯ) 25, ರಾಧಾ ಯಾದವ್ 19
ಲೂಸಿ ಹ್ಯಾಮಿಲ್ಟನ್ 2-36, ಎಲ್ಲಾ ಹೇವಾರ್ಡ್ 2-46