×
Ad

ಝಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ನಿಧನ

Update: 2023-09-03 12:13 IST

ಹರಾರೆ: ಝಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ಅವರು 49 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅವರ ಪತ್ನಿ ನಾಡಿನ್ ರವಿವಾರ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಖಚಿತಪಡಿಸಿದ್ದಾರೆ.

"ಸೆಪ್ಟೆಂಬರ್ 3, 2023 ರ ರವಿವಾರದ ಮುಂಜಾನೆ, ನನ್ನ ಜೀವನದ ಅತ್ಯಂತ ದೊಡ್ಡ ಪ್ರೀತಿ ಮತ್ತು ನನ್ನ ಸುಂದರ ಮಕ್ಕಳ ತಂದೆ ನಿಧನರಾದರು. ಅವರು ತಮ್ಮ ಕೊನೆಯ ದಿನಗಳನ್ನು ಕುಟುಂಬ ಹಾಗೂ ಅವರ ಹತ್ತಿರದ ಪ್ರೀತಿಪಾತ್ರರೊಂದಿಗೆ ಕಳೆಯಲು ಬಯಸಿದ್ದರು'' ಎಂದು ಸ್ಟ್ರೀಕ್ ಅವರ ಪತ್ನಿ ನಾಡಿನ್ ಸ್ಟ್ರೀಕ್ ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.

ಕೆಲವು ವಾರಗಳ ಹಿಂದೆ, ಸ್ಟ್ರೀಕ್ ಅವರ ಮಾಜಿ ಸಹೋದ್ಯೋಗಿ ಹೆನ್ರಿ ಒಲಾಂಗಾ ಅವರು ಸ್ಟ್ರೀಕ್ ಸಾವಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಆ ನಂತರ ಸ್ಟ್ರೀಕ್ ಮತ್ತು ಒಲಾಂಗಾ ಇಬ್ಬರೂ ಸುದ್ದಿ ಸುಳ್ಳು ಎಂದು ದೃಢಪಡಿಸಿದ್ದರು ಮತ್ತು ಒಲಾಂಗ ಅವರು ಸ್ಟ್ರೀಕ್ ಸಾವಿನ ಕುರಿತ ತಮ್ಮ ಪೋಸ್ಟ್ ಗೆ ಕ್ಷಮೆಯಾಚಿಸಿದ್ದರು.

ಝಿಂಬಾಬ್ವೆ ಕ್ರಿಕೆಟ್ ನ ಪ್ರಮುಖರಲ್ಲಿ ಒಬ್ಬರಾದ ಸ್ಟ್ರೀಕ್ ಗೆ 2018 ರಲ್ಲಿ ಭ್ರಷ್ಟಾಚಾರ-ವಿರೋಧಿ ಕೋಡ್ ಅನ್ನು ಉಲ್ಲಂಘಿಸಿದ್ದಕ್ಕಾಗಿ 2021 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಎಂಟು ವರ್ಷಗಳ ನಿಷೇಧ ವಿಧಿಸಿತ್ತು..

ಝಿಂಬಾಬ್ವೆಯ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಸ್ಟ್ರೀಕ್ ಟೆಸ್ಟ್ ಗಳಲ್ಲಿ 216 ಹಾಗೂ ಏಕದಿನ ಕ್ರಿಕೆಟ್ ನಲ್ಲಿ 239 ವಿಕೆಟ್ ಗಳನ್ನು ಕಬಳಿಸಿದ್ದರು. ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ಹೊರಬಂದ ನಂತರ, ಅವರು ಝಿಂಬಾಬ್ವೆ, ಬಾಂಗ್ಲಾದೇಶ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ತಂಡಗಳಿಗೆ ತರಬೇತಿ ನೀಡಿದ್ದರು. ಕೋಲ್ಕತ್ತಾ ನೈಟ್ ರೈಡರ್ಸ್ ಗೆ ಕೂಡ ಕೋಚಿಂಗ್ ನೀಡಿದ್ದರು.

ಸ್ಟ್ರೀಕ್ ಅವರು ಟೆಸ್ಟ್ ಹಾಗು ಏಕದಿನ ಎರಡರಲ್ಲೂ 100 ವಿಕೆಟ್ಗಳನ್ನು ಪಡೆದ ಮೊದಲ ಝಿಂಬಾಬ್ವೆ ಕ್ರಿಕೆಟಿಗರಾಗಿದ್ದರು. ಅವರು 100 ಟೆಸ್ಟ್ ವಿಕೆಟ್ ಗಳು ಹಾಗೂ 1,000 ಟೆಸ್ಟ್ ರನ್ ಗಳ ಡಬಲ್ ಸಾಧನೆ ಮಾಡಿರುವ ದೇಶದ ಏಕೈಕ ಕ್ರಿಕೆಟಿಗರಾಗಿದ್ದಾರೆ . ಏಕದಿನ ಕ್ರಿಕೆಟ್ ನಲ್ಲಿ 2000 ರನ್ ಹಾಗೂ 200 ವಿಕೆಟ್ ಗಳನ್ನು ಗಳಿಸಿದ ದೇಶದ ಏಕೈಕ ಆಟಗಾರರಾಗಿದ್ದಾರೆ.

ಸ್ಟ್ರೀಕ್ 1993 ರಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಚೊಚ್ಚಲ ಪಂದ್ಯವನ್ನು ಆಡಿದ್ದರು. 1999-2000 ಋತುವಿನಲ್ಲಿ ತಂಡದ ನಾಯಕರಾಗಿ ನೇಮಕಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News