ನಾಳೆ ಇಂಗ್ಲೆಂಡ್ ನಲ್ಲಿ ಟೀಮ್ ಇಂಡಿಯಾ ಸೇರಲಿದ್ದಾರೆ ಗಂಭೀರ್
ಗೌತಮ್ ಗಂಭೀರ್ | PTI
ಹೊಸದಿಲ್ಲಿ: ಕೌಟುಂಬಿಕ ಕಾರಣಕ್ಕೆ ಸ್ವದೇಶಕ್ಕೆ ಧಾವಿಸಿದ್ದ ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಜೂನ್ 17ರಂದು ಮಂಗಳವಾರ ಇಂಗ್ಲೆಂಡ್ ನಲ್ಲಿರುವ ಟೀಮ್ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ.
ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವು ಜೂನ್ 22ರಿಂದ ಆರಂಭವಾಗಲಿದೆ.
ಗಂಭೀರ್ ಅವರ ತಾಯಿ ಜೂನ್ 11ರಂದು ಹೃದಯಾಘಾತಕ್ಕೆ ಒಳಗಾದ ಹಿನ್ನೆಲೆಯಲ್ಲಿ ಗಂಭೀರ್ ಜೂನ್ 12ರಂದು ಸ್ವದೇಶಕ್ಕೆ ವಾಪಸಾಗಿದ್ದರು. ಗಂಭೀರ್ ಅವರ ತಾಯಿ ಸದ್ಯ ದಿಲ್ಲಿಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕ(ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗೌತಮ್ ಗಂಭೀರ್ ಸ್ವದೇಶಕ್ಕೆ ವಾಪಸಾದ ಸಂದರ್ಭದಲ್ಲಿ ಭಾರತದ ಸಹಾಯಕ ಕೋಚ್ ಗಳಾದ ಸೀತಾಂಶು ಕೋಟಕ್, ರಿಯಾನ್ ಟೆನ್ ಡೊಶಾಟ್ ಹಾಗೂ ಮೊರ್ನೆ ಮೊರ್ಕೆಲ್ ಭಾರತ ‘ಎ’ ತಂಡದ ವಿರುದ್ಧ ಬೆಕೆನ್ಹ್ಯಾಮ್ನಲ್ಲಿ ಚತುರ್ದಿನ ಪಂದ್ಯವನ್ನಾಡಿದ ಭಾರತ ತಂಡದ ಉಸ್ತುವಾರಿ ನೋಡಿಕೊಂಡಿದ್ದರು.
ಗಂಭೀರ್ ಹಾಗೂ ಹೊಸ ನಾಯಕ ಶುಭಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಿಂತ ಮೊದಲು ತಂಡದ ಆಯ್ಕೆಗೆ ಸಂಬಂಧಪಟ್ಟಂತೆ ಗೊಂದಲ ಎದುರಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರ ನಿವೃತ್ತಿಯಿಂದಾಗಿ ಬ್ಯಾಟಿಂಗ್ ಸರದಿಯಲ್ಲಿ ಭರ್ತಿ ಮಾಡಬೇಕಾಗಿದೆ.
ಬೌಲಿಂಗ್ ವಿಭಾಗದಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದ್ದು, ಅರ್ಷದೀಪ್ ಸಿಂಗ್, ಮುಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ ಕೃಷ್ಣರ ಪೈಕಿ ಒಬ್ಬರನ್ನು ಕೈಬಿಟ್ಟು, ಆಲ್ ರೌಂಡರ್ ಗಳಾದ ಶಾರ್ದುಲ್ ಠಾಕೂರ್ ಹಾಗೂ ನಿತೀಶ್ ರೆಡ್ಡಿ ಅವರನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ.