IPL | ಕದನ ವಿರಾಮದ ಬೆನ್ನಲ್ಲೇ ತರಬೇತಿ ಪುನರಾರಂಭಿಸಿದ ಗುಜರಾತ್ ಟೈಟಾನ್ಸ್
ಹೊಸದಿಲ್ಲಿ: ಭಾರತ ಹಾಗೂ ಪಾಕಿಸ್ತಾನ ಕದನ ವಿರಾಮಕ್ಕೆ ಸಮ್ಮತಿಸಿದ ನಂತರ ಶುಭಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ತರಬೇತಿಯನ್ನು ಪುನರಾರಂಭಿಸಿದ ಐಪಿಎಲ್‌ನ ಮೊದಲ ತಂಡ ಎನಿಸಿಕೊಂಡಿದೆ ಎಂದು ಆಂಗ್ಲಪತ್ರಿಕೆ ವರದಿ ಮಾಡಿದೆ.
ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಗುಜರಾತ್ ತಂಡವು ರವಿವಾರ ಸಂಜೆ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ತರಬೇತಿ ಆರಂಭಿಸಿತು. ಗುಜರಾತ್ ತಂಡವು ಇದೀಗ ಒಟ್ಟು 16 ಅಂಕ ಹಾಗೂ 0.793 ರನ್ರೇಟ್ನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
‘‘ಹೌದು, ನಾವು ತರಬೇತಿಯನ್ನು ಆರಂಭಿಸಿದ್ದೇವೆ. ಆಟಗಾರರು ಚುರುಕಾಗಿದ್ದು, ನಾವು ಪಂದ್ಯಕ್ಕೆ ಸಜ್ಜಾಗಿದ್ದೇವೆ’’ ಎಂದು ಗುಜರಾತ್ ತಂಡದ ಅಧಿಕಾರಿಯೊಬ್ಬರು ಆಂಗ್ಲಪತ್ರಿಕೆಗೆ ತಿಳಿಸಿದರು.
ಇನ್ನು 16 ಐಪಿಎಲ್ ಪಂದ್ಯಗಳನ್ನು ಆಡಲು ತಮ್ಮ ತಂಡಗಳನ್ನು ಒಂದೆಡೆ ಸೇರಿಸುವಂತೆ ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿಯು ಫ್ರಾಂಚೈಸಿಗಳಿಗೆ ಮೌಖಿಕವಾಗಿ ಕೇಳಿಕೊಂಡಿದೆ ಎಂದು ವರದಿಯಾಗಿದೆ. ಐಪಿಎಲ್ ಟೂರ್ನಿಯು ಮೇ 16ರಂದು ಪುನರಾರಂಭವಾಗುವ ಸಾಧ್ಯತೆಯಿದೆ.
ತರಬೇತಿಯಲ್ಲಿ ಇಂಗ್ಲೆಂಡ್ನ ಮಾಜಿ ನಾಯಕ ಜೋಸ್ ಬಟ್ಲರ್ ಹಾಗೂ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಜೆರಾಲ್ಡ್ ಕೊಯೆಟ್ಝಿ ಹೊರತುಪಡಿಸಿ ಗುಜರಾತ್ ತಂಡದ ಎಲ್ಲ ಆಟಗಾರರು ಭಾಗವಹಿಸಿದ್ದರು.