×
Ad

ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯದಿಂದ ಹೊರಗುಳಿದ ಹಾರ್ದಿಕ್ ಪಾಂಡ್ಯ

Update: 2023-10-20 20:22 IST

Hardik pandya,Photo:twitter

ಹೊಸದಿಲ್ಲಿ: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ನ್ಯೂಝಿಲ್ಯಾಂಡ್ ವಿರುದ್ಧ ರವಿವಾರ ಧರ್ಮಶಾಲಾದಲ್ಲಿ ಭಾರತ ಆಡಲಿರುವ ವಿಶ್ವಕಪ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯಕ್ಕೆ ಲಭ್ಯವಿರುವ ಸಾಧ್ಯತೆಯಿದೆ.

ಪುಣೆಯಲ್ಲಿ ಗುರುವಾರ ನಡೆದ ವಿಶ್ವಕಪ್ ಪಂದ್ಯದ ವೇಳೆ ಹಾರ್ದಿಕ್ ಪಾದದ ನೋವಿಗೆ ಒಳಗಾಗಿದ್ದರು. ಮುಂದಿನ ಪಂದ್ಯದ ವೇಳೆಗೆ ಅವರು ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ. ಟೀಮ್ ಮ್ಯಾನೇಜ್‌ಮೆಂಟ್ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿಲ್ಲ. ಹಾರ್ದಿಕ್ ಪಾಂಡ್ಯ ಅವರ ಆಲ್‌ರೌಂಡ್ ಕೌಶಲ್ಯವು ಟೂರ್ನಮೆಂಟ್‌ನಲ್ಲಿ ಭಾರತಕ್ಕೆ ನಿರ್ಣಾಯಕವಾಗಿದೆ.

ಬಾಂಗ್ಲಾದೇಶದ ಆರಂಭಿಕ ಬ್ಯಾಟರ್ ಲಿಟನ್ ದಾಸ್ ಬಾರಿಸಿದ ಸ್ಟ್ರೈಟ್ ಡ್ರೈವ್‌ರನ್ನು ಕಾಲಿನಲ್ಲಿ ತಡೆಯಲು ಯತ್ನಿಸಿದ ಪಾಂಡ್ಯ ಎಡ ಪಾದದ ನೋವಿಗೆ ಒಳಗಾಗಿದ್ದರು. ಮೈದಾನದಲ್ಲಿ ಪಾಂಡ್ಯ ಕಾಲಿಗೆ ಟೇಪ್ ಹಾಕಿದ್ದ ಫಿಜಿಯೋ ಅವರು ನೋವು ನಿವಾರಕ ಸ್ಪ್ರೇ ಸಿಂಪಡಿಸಿದ್ದರು. ಆದರೆ ಅದರಿಂದ ಚೇತರಿಸಿಕೊಳ್ಳದ ಪಾಂಡ್ಯ ಕುಂಟುತ್ತಾ ಮೈದಾನವನ್ನು ತೊರೆದರು.

ಬಾಂಗ್ಲಾದೇಶ ಇನಿಂಗ್ಸ್‌ನ 9ನೇ ಓವರ್‌ನಲ್ಲಿ ಮೂರು ಎಸೆತವನ್ನು ಎಸೆದಿದ್ದ ಪಾಂಡ್ಯ ಮಧ್ಯದಲ್ಲಿ ಬೌಲಿಂಗ್ ತೊರೆದರು. ಆಗ ವಿರಾಟ್ ಕೊಹ್ಲಿ ಉಳಿದ 3 ಎಸೆತಗಳನ್ನು ಎಸೆದರು.

ಆಲ್‌ರೌಂಡರ್ ಪಾಂಡ್ಯರನ್ನು ಸ್ಕ್ಯಾನಿಂಗ್‌ಗೆ ಕರೆದೊಯ್ಯಲಾಗಿದ್ದು, ಅವರಿಗೆ ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದರು. ಬಿಸಿಸಿಐನ ವೈದ್ಯಕೀಯ ತಂಡವು ಅವರ ಮೇಲೆ ನಿರಂತರ ನಿಗಾವಹಿಸಲಿದೆ ಎಂದು ಭಾರತದ ಕ್ರಿಕೆಟ್ ಮಂಡಳಿಯು ಹಾರ್ದಿಕ್ ಗಾಯದ ಕುರಿತು ಅಪ್‌ಟೇಡ್ ನೀಡಿದೆ.

ಪಾಂಡ್ಯ ಅಕ್ಟೋಬರ್ 20ರಂದು ತಂಡದೊಂದಿಗೆ ಧರ್ಮಶಾಲಾಕ್ಕೆ ವಿಮಾನದಲ್ಲಿ ತೆರಳುವುದಿಲ್ಲ. ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ಪಂದ್ಯವನ್ನಾಡಲು ಅವರು ನೇರವಾಗಿ ಲಕ್ನೊಕ್ಕೆ ತೆರಳಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News