ಹರ್ಷಿತ್ ರಾಣಾಗೆ ಛೀಮಾರಿ ಹಾಕಿದ ಐಸಿಸಿ
ಹರ್ಷಿತ್ ರಾಣಾ | Photo Credit : PTI
ಹೊಸದಿಲ್ಲಿ, ಡಿ.3: ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದ ವೇಳೆ ಆಕ್ರಮಣಕಾರಿ ವರ್ತನೆ ತೋರಿದ್ದ ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಹರ್ಷಿತ್ ರಾಣಾಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಬುಧವಾರ ಛೀಮಾರಿ ಹಾಕಿದ್ದಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಿದೆ.
ರಾಣಾ ಅವರು ಐಸಿಸಿ ನೀತಿ ಸಂಹಿತೆಯ ಲೆವೆಲ್-1ನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ ಎಂದು ಐಸಿಸಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ರವಿವಾರ ದಕ್ಷಿಣ ಆಫ್ರಿಕಾದ ಇನಿಂಗ್ಸ್ ನ 22ನೇ ಓವರ್ ನಲ್ಲಿ ಡೆವಾಲ್ಡ್ ಬ್ರೆವಿಸ್ ವಿಕೆಟನ್ನು ಉರುಳಿಸಿದ ಭಾರತದ ವೇಗಿ ರಾಣಾ ಅವರು ಡ್ರೆಸ್ಸಿಂಗ್ ರೂಮ್‌ಗೆ ತೆರಳುವಂತೆ ಸನ್ನೆ ಮಾಡಿದ್ದರು. ಈ ವರ್ತನೆಯ ಮೂಲಕ ಬ್ಯಾಟರ್ ಬ್ರೆವಿಸ್‌ರನ್ನು ಕೆರಳಿಸಿದ್ದರು.
24 ತಿಂಗಳುಗಳ ಅವಧಿಯಲ್ಲಿ ಮೊದಲ ತಪ್ಪೆಸಗಿರುವ ಕಾರಣ ರಾಣಾ ಅವರ ಶಿಸ್ತು ದಾಖಲೆಯಲ್ಲಿ ಒಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ರಾಣಾ 65 ರನ್‌ಗೆ 3 ವಿಕೆಟ್‌ಗಳನ್ನು ಪಡೆದಿದ್ದರು. ಈ ಪಂದ್ಯವನ್ನು 17 ರನ್‌ನಿಂದ ಗೆದ್ದಿರುವ ಭಾರತ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.