×
Ad

ಹಾಂಕಾಂಗ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ : ಸಾತ್ವಿಕ್-ಚಿರಾಗ್ ಸೆಮಿ ಫೈನಲ್‌ಗೆ

Update: 2025-09-12 22:26 IST

PC : NDTV 

ಹಾಂಕಾಂಗ್, ಸೆ.12: ಹಾಂಕಾಂಂಗ್ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸಿರುವ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ತಮ್ಮ ಶ್ರೇಷ್ಠ ಪ್ರದರ್ಶನ ಮುಂದುವರಿಸಿದರು.

ಸಾತ್ವಿಕ್ ಹಾಗೂ ಚಿರಾಗ್ ಶುಕ್ರವಾರ 64 ನಿಮಿಷಗಳ ಕಾಲ ನಡೆದ 500,000 ಡಾಲರ್ ಬಹುಮಾನ ಮೊತ್ತದ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮಲೇಶ್ಯದ ಎದುರಾಳಿಗಳಾದ ಆರಿಫ್ ಜುನೈದ್ ಹಾಗೂ ರಾಯ್ ಕಿಂಗ್ ಯಾಪ್‌ರನ್ನು 21-14, 20-22, 21-16 ಗೇಮ್‌ಗಳ ಅಂತರದಿಂದ ಮಣಿಸಿದರು.

ಇತ್ತೀಚೆಗಷ್ಟೇ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದ 8ನೇ ಶ್ರೇಯಾಂಕದ ಸಾತ್ವಿಕ್ ಹಾಗೂ ಚಿರಾಗ್ ನಿಧಾನಗತಿಯ ಆರಂಭ ಪಡೆದಿದ್ದರು. ಒಮ್ಮೆ ಲಯ ಕಂಡುಕೊಂಡ ನಂತರ ಶಕ್ತಿಶಾಲಿ ಹೊಡೆತಗಳಿಂದ ಎದುರಾಳಿಗಳಿಗೆ ನಡುಕ ಹುಟ್ಟಿಸಿದರು. ಸತತ 5 ಅಂಕಗಳನ್ನು ಕಲೆ ಹಾಕಿದರು.

ಮಲೇಶ್ಯ ಆಟಗಾರರು 2ನೇ ಗೇಮ್‌ನಲ್ಲಿ ಲಯ ಕಂಡುಕೊಂಡು ಪ್ರಬಲ ಪ್ರತಿ ಹೋರಾಟ ನೀಡಿದರು. 22-20ರಿಂದ 2ನೇ ಸೆಟ್ಟನ್ನು ಗೆದ್ದುಕೊಂಡರು.

3ನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಭಾರತೀಯ ಜೋಡಿಯು ಎದುರಾಳಿಗೆ ಪ್ರತಿರೋಧ ಒಡ್ಡಲು ಅವಕಾಶ ನೀಡಲಿಲ್ಲ. ಅಂತಿಮವಾಗಿ 21-16 ಅಂತರದಿಂದ 3ನೇ ಸೆಟ್ಟನ್ನು ಗೆದ್ದುಕೊಂಡಿದೆ.

ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಚೆನ್ ಚೆಂಗ್ ಕುವಾನ್ ಹಾಗೂ ಲಿನ್ ಬಿಂಗ್-ವೀ ಅವರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News