ಐಸಿಸಿ ಟೆಸ್ಟ್ ಆಟಗಾರರ ರ್‍ಯಾಂಕಿಂಗ್: ಸಿರಾಜ್, ರಾಹುಲ್, ಜಡೇಜಗೆ ಭಡ್ತಿ
ಮುಹಮ್ಮದ್ ಸಿರಾಜ್ , ಜಡೇಜ | Photo Credit : PTI
ಹೊಸದಿಲ್ಲಿ, ಅ.8: ಅಹ್ಮದಾಬಾದ್ ನಲ್ಲಿ ನಡೆದಿದ್ದ ವೆಸ್ಟ್‌ಇಂಡೀಸ್ ತಂಡದ ವಿರುದ್ಧ ಬೃಹತ್ ಅಂತರದಿಂದ ಗೆಲುವು ದಾಖಲಿಸಿರುವ ಆತಿಥೇಯ ಭಾರತ ತಂಡದ ಆಟಗಾರರು ಐಸಿಸಿ ಪುರುಷರ ಟೆಸ್ಟ್ ಆಟಗಾರರ ರ್‍ಯಾಂಕಿಂಗ್ ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ.
ಪಂದ್ಯದಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ್ದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಟೆಸ್ಟ್ ಕ್ರಿಕೆಟಿನ ಅಗ್ರಮಾನ್ಯ ಬೌಲರ್ ಆಗಿ ಮುಂದುವರಿದಿದ್ದಾರೆ. ಬುಮ್ರಾರ ಜೊತೆಗಾರ ಮುಹಮ್ಮದ್ ಸಿರಾಜ್ ಮೂರು ಸ್ಥಾನ ಮೇಲಕ್ಕೇರಿ 12ನೇ ಸ್ಥಾನ ತಲುಪಿದ್ದಾರೆ. ಈ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಸಿರಾಜ್ ವೆಸ್ಟ್‌ಇಂಡೀಸ್ ವಿರುದ್ಧ ಸರಣಿಯ ಆರಂಭಿಕ ಪಂದ್ಯದಲ್ಲಿ ಒಟ್ಟು 7 ವಿಕೆಟ್‌ಗಳನ್ನು ಉರುಳಿಸಿದ್ದರು.
ಭಾರತ ತಂಡದ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಅಹ್ಮದಾಬಾದ್ ಟೆಸ್ಟ್‌ನಲ್ಲಿ 4 ವಿಕೆಟ್‌ಗಳನ್ನು ಉರುಳಿಸಿದ ನಂತರ 7 ಸ್ಥಾನ ಭಡ್ತಿ ಪಡೆದು 21ನೇ ಸ್ಥಾನ ತಲುಪಿದ್ದಾರೆ.
ಬ್ಯಾಟರ್‌ಗಳ ಹೊಸ ರ್‍ಯಾಂಕಿಂಗ್ ನಲ್ಲಿ ಆರು ಸ್ಥಾನ ಜಿಗಿದಿರುವ ರವೀಂದ್ರ ಜಡೇಜ 25ನೇ ಸ್ಥಾನ ತಲುಪಿದ್ದಾರೆ. ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಡೇಜ ಔಟಾಗದೆ 106 ರನ್ ಗಳಿಸ್ದಿರು.
ಅಹ್ಮದಾಬಾದ್ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ್ದ ಕೆ.ಎಲ್.ರಾಹುಲ್ 4 ಸ್ಥಾನ ಭಡ್ತಿ ಪಡೆದು 35ನೇ ಸ್ಥಾನ ಪಡೆದಿದ್ದಾರೆ.
ಟೆಸ್ಟ್ ಆಲ್‌ರೌಂಡರ್ ಗಳ ಪೈಕಿ ಜಡೇಜ ಅಗ್ರ ರ್‍ಯಾಂಕ ಕಾಯ್ದುಕೊಂಡಿದ್ದಾರೆ. ಜಡೇಜರ ಸಹ ಆಟಗಾರ ವಾಶಿಂಗ್ಟನ್ ಸುಂದರ್ 4 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ತಲುಪಿದ್ದಾರೆ.
ಟಿ20 ರ್‍ಯಾಂಕಿಂಗ್: ಮಿಚೆಲ್ ಮಾರ್ಷ್‌ಗೆ ಭಡ್ತಿ
ನ್ಯೂಝಿಲ್ಯಾಂಡ್ ವಿರುದ್ಧ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಆಸ್ಟ್ರೇಲಿಯ ತಂಡದ ನಾಯಕ ಮಿಚೆಲ್ ಮಾರ್ಷ್ ಬುಧವಾರ ಬಿಡುಗಡೆಯಾಗಿರುವ ಟಿ-20 ರ್‍ಯಾಂಕಿಂಗ್ ನಲ್ಲಿ 13 ಸ್ಥಾನ ಭಡ್ತಿ ಪಡೆದು 10ನೇ ಸ್ಥಾನ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಶತಕ ಗಳಿಸಿದ್ದ ಕಿವೀಸ್ ಬ್ಯಾಟರ್ ಟಿಮ್ ರಾಬಿನ್ಸನ್ 58 ಸ್ಥಾನಗಳಲ್ಲಿ ಭಡ್ತಿ ಪಡೆದು 22ನೇ ಸ್ಥಾನ ಗಿಟ್ಟಿಸಿದ್ದಾರೆ.
ಅಫ್ಘಾನಿಸ್ತಾನ ವಿರುದ್ಧದ 3ನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಅರ್ಧಶತಕ ಗಳಿಸಿದ ನಂತರ ಬಾಂಗ್ಲಾದೇಶದ ಸೈಫ್ ಹಸನ್ 17 ಸ್ಥಾನಗಳಲ್ಲಿ ಏರಿಕೆ ಕಂಡು 18ನೇ ಸ್ಥಾನ ತಲುಪಿದ್ದಾರೆ.
ಬಾಂಗ್ಲಾದೇಶ ವಿರುದ್ಧ 3 ಟಿ-20 ಪಂದ್ಯಗಳಲ್ಲಿ 6 ವಿಕೆಟ್‌ಗಳನ್ನು ಕಬಳಿಸಿರುವ ಅಫ್ಘಾನಿಸ್ತಾನದ ಸ್ಪಿನ್ ಬೌಲರ್ ರಶೀದ್ ಖಾನ್ ಬೌಲರ್‌ಗಳ ರ್‍ಯಾಂಕಿಂಗ್ ನಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ರಶೀದ್ ಅವರ ಸಹ ಆಟಗಾರರಾದ ನೂರ್ ಅಹ್ಮದ್ ಹಾಗೂ ಮಜೀಬ್‌ವುರ‌್ರಹ್ಮಾನ್ ಕ್ರಮವಾಗಿ 17ನೇ ಹಾಗೂ 23ನೇ ಸ್ಥಾನಕ್ಕೇರಿದ್ದಾರೆ.
ಆಸ್ಟ್ರೇಲಿಯದ ವೇಗದ ಬೌಲರ್ ಜೋಶ್ ಹೇಝಲ್‌ವುಡ್ 13ನೇ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.