×
Ad

ಐಸಿಸಿ ಟ್ವೆಂಟಿ-20 ರ‍್ಯಾಂಕಿಂಗ್‌: ಅಗ್ರಸ್ಥಾನ ಕಾಯ್ದುಕೊಂಡ ಸೂರ್ಯಕುಮಾರ್

Update: 2023-12-13 22:20 IST

ಸೂರ್ಯಕುಮಾರ್ | Photo: PTI  

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆದ ದ್ವಿತೀಯ ಟಿ-20 ಪಂದ್ಯದ ವೇಳೆ ಮಿಂಚಿನ ವೇಗದಲ್ಲಿ ಅರ್ಧಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ಟಿ-20 ರ‍್ಯಾಂಕಿಂಗ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದ್ದು ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.

ನಾಯಕ ಸೂರ್ಯಕುಮಾರ್ 36 ಎಸೆತಗಳಲ್ಲಿ 56 ರನ್ ಗಳಿಸಿ ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ್ದರು. ಈ ಮೂಲಕ ಒಟ್ಟು 10 ರೇಟಿಂಗ್ ಪಾಯಿಂಟ್ಸ್ ಪಡೆದಿದ್ದರು. ಒಟ್ಟು 865 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಚುಟುಕು ಮಾದರಿ ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಭಾರತದ ಉದಯೋನ್ಮುಖ ಸ್ಟಾರ್ ರಿಂಕು ಸಿಂಗ್ 46 ಸ್ಥಾನಗಳಲ್ಲಿ ಭಡ್ತಿ ಪಡೆದು ರ‍್ಯಾಂಕಿಂಗ್‌ನಲ್ಲಿ 59ನೇ ಸ್ಥಾನ ತಲುಪಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಅರ್ಧಶತಕ(ಔಟಾಗದೆ 68)ಗಳಿಸಿದ ನಂತರ ರಿಂಕು ಈ ಸಾಧನೆ ಮಾಡಿದ್ದಾರೆ.

ಸೂರ್ಯ ಸದ್ಯ ರ‍್ಯಾಂಕಿಂಗ್‌ನಲ್ಲಿ ನಿಕಟ ಸ್ಪರ್ಧಿಗಳಿಗಿಂತ ಸಾಕಷ್ಟು ಮುಂದಿದ್ದಾರೆ. ಪಾಕಿಸ್ತಾನದ ಮುಹಮ್ಮದ್ ರಿಝ್ವಾನ್ 787 ಅಂಕ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ರಮ್ 758 ಅಂಕ ಗಳಿಸಿದ್ದಾರೆ. ವಿಶ್ವಕಪ್ ಟೂರ್ನಮೆಂಟ್ ಆರಂಭವಾಗಲು ಆರು ತಿಂಗಳಿಗಿಂತ ಕಡಿಮೆ ಸಮಯ ಇರುವಾಗ ಸೂರ್ಯ ಅವರು ಈ ಮಹತ್ವದ ಮೇಲುಗೈ ಪಡೆದಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯದಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಅಂತ್ಯದ ವೇಳೆ ಸೂರ್ಯಕುಮಾರ್ ಈ ಪ್ರಮುಖ ರ‍್ಯಾಂಕ್ ಪಡೆದಿದ್ದರು. ಈಗಿನ ಫಾರ್ಮ್‌ನ್ನು ಗಮನಿಸಿದರೆ ಮುಂದಿನ ವರ್ಷ ವೆಸ್ಟ್‌ಇಂಡೀಸ್ ಹಾಗೂ ಯುಎಸ್ಎನಲ್ಲಿ ನಡೆಯಲಿರುವ ವಿಶ್ವಕಪ್ ತನಕವೂ ಸೂರ್ಯ ಮೊದಲ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯಿದೆ.

ಭಾರತ ವಿರುದ್ಧ 49 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ರೀಝಾ ಹೆಂಡ್ರಿಕ್ಸ್ ಒಂದು ಸ್ಥಾನ ಮೇಲಕ್ಕೇರಿ 8ನೇ ಸ್ಥಾನ ತಲುಪಿದ್ದಾರೆ. ತಿಲಕ್ ವರ್ಮಾ 10 ಸ್ಥಾನಗಳ ಭಡ್ತಿ ಪಡೆದು 55ನೇ ಸ್ಥಾನ ತಲುಪಿದ್ದಾರೆ.

ದಕ್ಷಿಣ ಆಫ್ರಿಕಾದ ಸ್ಪಿನ್ನರ್ ತಬ್ರೈಝ್ ಶಮ್ಸಿ ಎರಡು ಸ್ಥಾನ ಮೇಲಕ್ಕೇರಿ 10ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News