ಡಿ.9ರಿಂದ ಐದು ಪಂದ್ಯಗಳ T20 ಸರಣಿ ಆರಂಭ; ಕಟಕ್ ನಲ್ಲಿ Ind Vs SA ಮೊದಲ ಮುಖಾಮುಖಿ
Photo Credit : PTI
ಭುವನೇಶ್ವರ, ಡಿ.8: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ರೋಚಕವಾಗಿ ಗೆದ್ದುಕೊಂಡಿರುವ ಟೀಮ್ ಇಂಡಿಯಾವು ಕಟಕ್ ನ ಬಾರಬತಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆಯಲಿರುವ ಬಹುನಿರೀಕ್ಷಿತ ಐದು ಪಂದ್ಯಗಳ T20 ಸರಣಿಯ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಗೆಲುವಿನ ಲಯವನ್ನು ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.
ಭಾರತೀಯ ಹಾಗೂ ದಕ್ಷಿಣ ಆಫ್ರಿಕಾದ ಪುರುಷರ ಕ್ರಿಕೆಟ್ ತಂಡಗಳು ರವಿವಾರ ಭುವನೇಶ್ವರಕ್ಕೆ ಆಗಮಿಸಿವೆ. ಇದೀಗ ಉಭಯ ತಂಡಗಳು 50 ಓವರ್ ಗಳ ಪಂದ್ಯದಿಂದ T20 ಮಾದರಿಯ ಕ್ರಿಕೆಟ್‌ನತ್ತ ತಮ್ಮ ಮೂಡ್ ಬದಲಿಸಬೇಕಾಗಿದೆ.
ಮುಂದಿನ ವರ್ಷ ಭಾರತದ ಆತಿಥ್ಯದಲ್ಲಿ ನಡೆಯಲಿರುವ T20 ವಿಶ್ವಕಪ್‌ಗೆ ಮೊದಲು ನಡೆಯುತ್ತಿರುವ ಈ ಪ್ರಮುಖ ಸರಣಿಗೆ ಸೂರ್ಯಕುಮಾರ್ ಯಾದವ್ ನಾಯಕನಾಗಿ ಮುಂದುವರಿಯಲಿದ್ದಾರೆ.
ಏಡೆನ್ ಮರ್ಕ್ರಮ್ ದಕ್ಷಿಣ ಆಫ್ರಿಕಾದ ನಾಯಕತ್ವವಹಿಸಿದ್ದು, T20 ಸ್ಪೆಷಲಿಸ್ಟ್ ಗಳಾದ ಡೇವಿಡ್ ಮಿಲ್ಲರ್ ಹಾಗೂ ರೀಝಾ ಹೆಂಡ್ರಿಕ್ಸ್ T20 ಕ್ರಿಕೆಟ್ ತಂಡಕ್ಕೆ ವಾಪಸಾಗಿದ್ದಾರೆ.
ಟೆಸ್ಟ್ ಹಾಗೂ ಏಕದಿನ ಸರಣಿಗಳಿಂದ ವಂಚಿತರಾಗಿದ್ದ ಉಪ ನಾಯಕ ಶುಭಮನ್ ಗಿಲ್ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ T20 ಸರಣಿಯ ಆರಂಭಿಕ ಪಂದ್ಯಕ್ಕೆ ಲಭ್ಯವಿರಲಿದ್ದಾರೆ. ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕುತ್ತಿಗೆ ನೋವಿಗೆ ಒಳಗಾಗಿದ್ದ ಗಿಲ್ ಸುಮಾರು ಒಂದು ತಿಂಗಳಿನಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಪಾಂಡ್ಯ ಸೆಪ್ಟಂಬರ್‌ನಲ್ಲಿ ನಡೆದಿದ್ದ ಏಶ್ಯ ಕಪ್ ಪಂದ್ಯದ ವೇಳೆ ಗಾಯಗೊಂಡಿದ್ದು, ಎರಡು ತಿಂಗಳುಗಳಿಂದ ಸಕ್ರಿಯ ಕ್ರಿಕೆಟ್‌ನಿಂದ ದೂರವಾಗಿದ್ದರು.
‘‘ಗಿಲ್ ಹಾಗೂ ಪಾಂಡ್ಯ ಸಂಪೂರ್ಣ ಆರೋಗ್ಯವಂತರಾಗಿ, ಫಿಟ್ ಇದ್ದಂತೆ ಕಾಣುತ್ತಿದ್ದಾರೆ. ಸಂಜು ಸ್ಯಾಮ್ಸನ್ ಬದಲಿಗೆ ಗಿಲ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ’’ಎಂದು ಸೂರ್ಯಕುಮಾರ್ ಖಚಿತಪಡಿಸಿದರು.
ಕೇರಳದ ಬ್ಯಾಟರ್ ಸ್ಯಾಮ್ಸನ್ ಮಧ್ಯಮ ಸರದಿಯಲ್ಲಿ ಸ್ಥಾನವನ್ನು ಪಡೆಯಲು ಜಿತೇಶ್ ಶರ್ಮಾರಿಂದ ಸ್ಪರ್ಧೆಯನ್ನು ಎದುರಿಸುತ್ತಿದ್ದಾರೆ.
‘‘ನಾವು ಆಡಿರುವ ಹಿಂದಿನ 5-6 ಸರಣಿಗಳಲ್ಲಿ ಆಡುವ ಬಳಗದಲ್ಲಿ ಹೆಚ್ಚಿನ ಬದಲಾವಣೆ ಮಾಡಿರಲಿಲ್ಲ. ಒಂದೇ ಕಾಂಬಿನೇಶನ್ ನೊಂದಿಗೆ ಆಡಿದ್ದೆವು. ಎಲ್ಲವೂ ಅಂದುಕೊಂಡಂತೆ ನಡೆದಿದೆ. ನಾವು ಆ ಹಾದಿಯಲ್ಲೇ ಮುಂದುವರಿಯುತ್ತೇವೆ’’ಎಂದು ಸೂರ್ಯಕುಮಾರ್ ಹೇಳಿದ್ದಾರೆ.
ಗಿಲ್ ಗಾಯದಿಂದ ಚೇತರಿಸಿಕೊಂಡ ನಂತರ ಯಾವುದೇ ಪಂದ್ಯ ಆಡಿಲ್ಲ. ಹಾರ್ದಿಕ್ ಪಾಂಡ್ಯ ಅವರು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಬರೋಡ ತಂಡದ ಪರ ಆಡಿದ್ದರು. ಎರಡು ಪಂದ್ಯಗಳಲ್ಲಿ ನಾಲ್ಕು ಓವರ್ ಬೌಲಿಂಗ್ ಮಾಡಿದ್ದ ಪಾಂಡ್ಯ ತಲಾ ಒಂದು ವಿಕೆಟ್ ಪಡೆದಿದ್ದರು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ 42 ಎಸೆತಗಳಲ್ಲಿ ಔಟಾಗದೆ 77 ರನ್ ಗಳಿಸಿ ಬರೋಡ ತಂಡವು 223 ರನ್ ಚೇಸ್ ಮಾಡಲು ನೆರವಾಗಿದ್ದರು.
ಕಟಕ್‌ಗೆ ಬೇಗನೆ ಆಗಮಿಸಿರುವ ಪಾಂಡ್ಯ ಅವರು ಬಾರಬತಿ ಸ್ಟೇಡಿಯಂನಲ್ಲಿ ಒಬ್ಬರೇ ತರಬೇತಿ ನಡೆಸಿದ್ದಾರೆ.
ಹಾಲಿ T20 ಚಾಂಪಿಯನ್ ಭಾರತ ತಂಡವು 2026ರ ಫೆಬ್ರವರಿಯಲ್ಲಿ ಸ್ವದೇಶದಲ್ಲಿ ನಡೆಯಲಿರುವ T20 ವಿಶ್ವಕಪ್ ಗಿಂತ ಮೊದಲು ಪ್ರಸಕ್ತ ಐದು ಪಂದ್ಯಗಳ ಸರಣಿ ಸೇರಿದಂತೆ 10 ಪಂದ್ಯಗಳನ್ನಾಡಲಿದೆ.
‘‘ನಾವು 2024ರಲ್ಲಿ T20 ವಿಶ್ವಕಪ್ ಗೆದ್ದ ಬೆನ್ನಿಗೇ 2026ರ ಟಿ20 ವಿಶ್ವಕಪ್‌ಗೆ ಸಿದ್ಧತೆ ಆರಂಭಿಸಿದ್ದೇವೆ. 2024ರ ವಿಶ್ವಕಪ್ ನಂತರ ನಾವು ಹೊಸತನವನ್ನು ಪ್ರಯತ್ನಿಸಿದ್ದು, ಎಲ್ಲದರಲ್ಲೂ ಯಶಸ್ಸು ಕಂಡಿದ್ದೇವೆ’’ಎಂದು ಸೂರ್ಯಕುಮಾರ್ ಹೇಳಿದ್ದಾರೆ.
►T20 ಕ್ರಿಕೆಟ್‌ನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಹೆಡ್-ಟು-ಹೆಡ್
ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳು T20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ 18 ಪಂದ್ಯಗಳನ್ನು ಭಾರತ ತಂಡ ಗೆದ್ದುಕೊಂಡು ಮೇಲುಗೈ ಸಾಧಿಸಿದೆ. ದಕ್ಷಿಣ ಆಫ್ರಿಕಾ ತಂಡವು 12 ಬಾರಿ ಗೆಲುವು ದಾಖಲಿಸಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿರಲಿಲ್ಲ. ಹಿಂದಿನ ಐದು ಮುಖಾಮುಖಿಗಳಲ್ಲಿ ಭಾರತ ತಂಡವು ನಾಲ್ಕರಲ್ಲಿ ಜಯ ಸಾಧಿಸಿದ್ದು, ಹರಿಣ ಪಡೆಯು ಕಳೆದ ವರ್ಷದ ನವೆಂಬರ್ ನಲ್ಲಿ ಸ್ವದೇಶದಲ್ಲಿ ಏಕೈಕ ಪಂದ್ಯ ಗೆದ್ದುಕೊಂಡಿತ್ತು.
*ಟಾಪ್ ಸ್ಕೋರರ್ ಗಳು: ಎಡಗೈ ಬ್ಯಾಟರ್ ಡೇವಿಡ್ ಮಿಲ್ಲರ್ ಭಾರತ-ದಕ್ಷಿಣ ಆಫ್ರಿಕಾ ನಡುವಿನ T20 ಹಣಾಹಣಿಯಲ್ಲಿ 25 ಪಂದ್ಯಗಳಲ್ಲಿ 34.93ರ ಸರಾಸರಿಯಲ್ಲಿ 147.19ರ ಸ್ಟ್ರೈಕ್‌ರೇಟ್‌ನಲ್ಲಿ ಒಟ್ಟು 524 ರನ್ ಗಳಿಸಿದ್ದಾರೆ. ನಿವೃತ್ತಿಯಾಗಿರುವ ರೋಹಿತ್ ಶರ್ಮಾ(18 ಪಂದ್ಯಗಳಲ್ಲಿ 429 ರನ್)ಹಾಗೂ ವಿರಾಟ್ ಕೊಹ್ಲಿ(13 ಪಂದ್ಯಗಳಲ್ಲಿ 394 ರನ್)ಆ ನಂತರದ ಸ್ಥಾನದಲ್ಲಿದ್ದಾರೆ.
ಈಗಿನ ಭಾರತೀಯ ಆಟಗಾರರ ಪೈಕಿ ನಾಯಕ ಸೂರ್ಯಕುಮಾರ್ 11 ಪಂದ್ಯಗಳಲ್ಲಿ 41.33ರ ಸರಾಸರಿಯಲ್ಲಿ ಒಟ್ಟು 372 ರನ್ ಗಳಿಸಿದ್ದಾರೆ.
► ಗರಿಷ್ಠ ವಿಕೆಟ್ ಸರದಾರರು: ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ 10 ಪಂದ್ಯಗಳಲ್ಲಿ 17ರ ಸರಾಸರಿಯಲ್ಲಿ 18 ವಿಕೆರ್ ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಕೇಶವ ಮಹಾರಾಜ್ 15 ಪಂದ್ಯಗಳಲ್ಲಿ 27.66ರ ಸರಾಸರಿಯಲ್ಲಿ ಒಟ್ಟು 15 ವಿಕೆರ್ ಗಳನ್ನು ಉರುಳಿಸಿದ್ದಾರೆ.
ತಂಡಗಳು
ಭಾರತ: ಸೂರ್ಯಕುಮಾರ್ ಯಾದವ್(ನಾಯಕ),ಶುಭಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಜಸ್‌ಪ್ರಿತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ ಸಿಂಗ್, ಕುಲದೀಪ ಯಾದವ್, ಹರ್ಷಿತ್ ರಾಣಾ, ವಾಶಿಂಗ್ಟನ್ ಸುಂದರ್.
ದಕ್ಷಿಣ ಆಫ್ರಿಕಾ: ಏಡೆನ್ ಮರ್ಕ್ರಮ್(ನಾಯಕ), ಡೆವಾಲ್ಡ್ ಬ್ರೆವಿಸ್, ಟೋನಿ ಡಿ ರೆರ್ಝಿ, ರೀಝಾ ಹೆಂಡ್ರಿಕ್ಸ್, ಡೇವಿಡ್ ಮಿಲ್ಲರ್. ಜಾರ್ಜ್ ಲಿಂಡ್, ಕಾರ್ಬಿನ್ ಬಾಷ್, ಮಾರ್ಕೊ ಜಾನ್ಸನ್, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಡೊನೊವನ್ ಫೆರೇರ(ವಿಕೆಟ್ ಕೀಪರ್), ಟ್ರಿಸ್ಟನ್ ಸ್ಟಬ್ಸ್, ಒಟ್ನೀಲ್ ಬಾರ್ಟ್‌ಮನ್, ಕೇಶವ ಮಹಾರಾಜ್, ಕ್ವೆನಾ ಮಫಾಕಾ, ಲುಂಗಿ ಗಿಡಿ, ಅನ್ರಿಚ್ ನೋಟ್ಜೆ.
► ಪಂದ್ಯ ಆರಂಭದ ಸಮಯ: ರಾತ್ರಿ 7:00
► ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್
►ಭಾರತ-ದಕ್ಷಿಣ ಆಫ್ರಿಕಾ T20 ವೇಳಾಪಟ್ಟಿ
ಪಂದ್ಯ ದಿನಾಂಕ ದಿನ ಸಮಯ ಸ್ಥಳ
1ನೇ T20 ಡಿ.9 ಮಂಗಳವಾರ ರಾತ್ರಿ 7:00 ಕಟಕ್
2ನೇ T20 ಡಿ.11 ಗುರುವಾರ ರಾತ್ರಿ 7:00 ನ್ಯೂ ಚಂಡಿಗಡ
3ನೇ ಟಿ20 ಡಿ.14 ರವಿವಾರ ರಾತ್ರಿ 7:00 ಧರ್ಮಶಾಲಾ
4ನೇ ಟಿ20 ಡಿ.17 ಬುಧವಾರ ರಾತ್ರಿ 7:00 ಲಕ್ನೊ
5ನೇ ಟಿ20 ಡಿ.19 ಶುಕ್ರವಾರ ರಾತ್ರಿ 7:00 ಅಹ್ಮದಾಬಾದ್