ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ವೈಫಲ್ಯ ಸುಧಾರಿಸಿಕೊಳ್ಳುವ ವಿಶ್ವಾಸದಲ್ಲಿ ಭಾರತ
PC : PTI
ಹೊಸದಿಲ್ಲಿ: ಈಗಾಗಲೇ ಟಿ20 ಸರಣಿ ಕೈವಶ ಮಾಡಿಕೊಂಡಿರುವ ಟೀಮ್ ಇಂಡಿಯಾ ರವಿವಾರ ಮುಂಬೈನ ವಾಂಖೆಡೆ ಸ್ಟೇಡಿಯಮ್‌ನಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಎದುರಿಸಲಿದ್ದು, ನಿರಂತರ ಬ್ಯಾಟಿಂಗ್ ವೈಫಲ್ಯವನ್ನು ಹೋಗಲಾಡಿಸಿಕೊಳ್ಳುವತ್ತ ಗಮನ ಹರಿಸಲು ಬಯಸಿದೆ.
ಇಂಗ್ಲೆಂಡ್ ತಂಡವನ್ನು 4ನೇ ಟಿ20 ಪಂದ್ಯದಲ್ಲಿ 15 ರನ್‌ನಿಂದ ರೋಚಕವಾಗಿ ಮಣಿಸಿರುವ ಭಾರತ ತಂಡವು 5 ಪಂದ್ಯಗಳ ಟೂರ್ನಿಯಲ್ಲಿ 3-1 ಮುನ್ನಡೆ ಸಾಧಿಸಿದೆ. ಸರಣಿಯ ಕೊನೆಯ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ರನ್ ಬರ ನೀಗಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಸರಣಿ ಸೋತಿರುವ ಆಂಗ್ಲರ ಪಡೆ ಕೇವಲ ಪ್ರತಿಷ್ಠೆಗಾಗಿ ಈ ಪಂದ್ಯವನ್ನು ಆಡಲಿದೆ.
ಶಿವಂ ದುಬೆಗೆ ಬ್ಯಾಟಿಂಗ್ ವೇಳೆ ತಲೆಗೆ ಗಾಯವಾದ ಕಾರಣ ಬದಲಿ ಆಟಗಾರನಾಗಿ ವೇಗದ ಬೌಲರ್ ಹರ್ಷಿತ್ ರಾಣಾ ಆಡುವ ಅವಕಾಶ ಪಡೆದಿರುವುದಕ್ಕೆ ಇಂಗ್ಲೆಂಡ್ ತಂಡ ಅಸಮಾಧಾನಗೊಂಡಿದೆ. ರಾಣಾ 33 ರನ್‌ಗೆ ನಿರ್ಣಾಯಕ 3 ವಿಕೆಟ್‌ಗಳನ್ನು ಪಡೆದು ಭಾರತದ 15 ರನ್ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಿದ್ದರು.
ಐಸಿಸಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಅವರು ಬದಲಿ ಆಟಗಾರನನ್ನು ಆಯ್ಕೆ ಮಾಡಲು ಅವಕಾಶ ನೀಡಿದ್ದರು. ರಮಣ್‌ದೀಪ್ ಸಿಂಗ್‌ರಂತಹ ಹೆಚ್ಚು ಸಮರ್ಥ ಬದಲಿ ಆಟಗಾರರು ಇರುವಾಗ ರಾಣಾರನ್ನು ಆಯ್ಕೆ ಮಾಡಲು ಅವಕಾಶ ನೀಡಿದ್ದಕ್ಕೆ ಇಂಗ್ಲೆಂಡ್ ತಂಡವು ಆಕ್ಷೇಪ ವ್ಯಕ್ತಪಡಿಸಿದೆ.
ಶುಕ್ರವಾರ ಪುಣೆಯಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಗೆಲ್ಲಲು 182 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು 7ನೇ ಓವರ್‌ನಲ್ಲಿ 1 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಆಗ ಭಾರತೀಯ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ(2-28)ಹಾಗೂ ರವಿ ಬಿಷ್ಣೋಯಿ(3-28) ಇಂಗ್ಲೆಂಡ್ ಗೆಲುವಿನ ಧಾವಂತಕ್ಕೆ ಕಡಿವಾಣ ಹಾಕಿದರು.
ಭಾರತ ತಂಡವು ಸರಣಿಯನ್ನು ಗೆದ್ದುಕೊಂಡಿದ್ದರೂ ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಚಿಂತಿತವಾಗಿದೆ.
ಟಿ20 ಸರಣಿಗೆ ಪ್ರವೇಶಿಸಿ ಕೇರಳದ ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡುವುದರಿಂದ ವಂಚಿತರಾಗಿದ್ದ ಸ್ಯಾಮ್ಸನ್ ಇಂಗ್ಲೆಂಡ್‌ನ ಮಾರ್ಕ್ ವುಡ್ ಹಾಗೂ ಜೋಫ್ರಾ ಆರ್ಚರ್ ಅವರ ವೇಗದ ಬೌಲಿಂಗ್ ದಾಳಿ ಎದುರಿಸುವಲ್ಲಿ ಎಡವುತ್ತಿದ್ದಾರೆ. ಈ ಇಬ್ಬರು ಬೌಲರ್‌ಗಳು ಭಾರತೀಯ ಆರಂಭಿಕ ಬ್ಯಾಟರ್‌ಗೆ ನಿರಂತರವಾಗಿ ಕಾಡುತ್ತಿದ್ದಾರೆ.
ಸ್ಯಾಮ್ಸನ್ 4 ಪಂದ್ಯಗಳಲ್ಲಿ ಕೇವಲ 35 ರನ್ ಗಳಿಸಿ ನಿರಾಶೆಗೊಳಿಸಿದ್ದಾರೆ. ವಿಶ್ವ ಟಿ20 ಬ್ಯಾಟಿಂಗ್ ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿರುವ ಸೂರ್ಯಕುಮಾರ್, ಬಾಂಗ್ಲಾದೇಶ ವಿರುದ್ಧ 75 ರನ್ ಗಳಿಸಿದ ನಂತರ ದೊಡ್ಡ ಸ್ಕೋರ್ ಕಲೆ ಹಾಕಿಲ್ಲ.
ಭಾರತ ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಪ್ರಸಕ್ತ ಸರಣಿಯಲ್ಲಿ 2 ಬಾರಿ ಶೂನ್ಯಕ್ಕೆ ಔಟಾಗಿದ್ದು, 12 ಹಾಗೂ 14 ರನ್ ಗಳಿಸಿದ್ದಾರೆ. ‘ಸ್ಕೈ’ ಖ್ಯಾತಿಯ ಸೂರ್ಯಕುಮಾರ್ ತನ್ನ ತವರು ಮೈದಾನ ವಾಂಖೆಡೆ ಕ್ರೀಡಾಂಗಣಕ್ಕೆ ವಾಪಸಾಗಿದ್ದು, ಕಳಪೆ ಫಾರ್ಮ್‌ನಿಂದ ಹೊರಬರುವ ವಿಶ್ವಾಸದಲ್ಲಿದ್ದಾರೆ.
4ನೇ ಟಿ20 ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ದಯನೀಯ ವೈಫಲ್ಯ ಕಂಡಾಗ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ಅರ್ಧಶತಕಗಳನ್ನು ಸಿಡಿಸಿ ತಂಡವನ್ನು ಆಧರಿಸಿದ್ದರು. ಬ್ಯಾಟಿಂಗ್ ಸ್ನೇಹಿ ಪಿಚ್ ಹೊಂದಿರುವ ಮುಂಬೈನಲ್ಲಿ ಭಾರತ ತಂಡಕ್ಕೆ ಬ್ಯಾಟಿಂಗ್ ವೈಫಲ್ಯ ಸರಿಪಡಿಸಿಕೊಳ್ಳಲು ಮತ್ತೊಂದು ಅವಕಾಶ ಲಭಿಸಿದೆ.
ಹಲವಾರು ಬೌಲಿಂಗ್ ಆಯ್ಕೆಗಳನ್ನು ಹೊಂದಿರುವ ಭಾರತ ತಂಡವು ಪ್ರಸಕ್ತ ಸರಣಿಯ ವೇಳೆ ಇಬ್ಬರು ಸ್ಟಾರ್ ವೇಗಿಗಳಾದ ಮುಹಮ್ಮದ್ ಶಮಿ ಹಾಗೂ ಅರ್ಷದೀಪ್ ಸಿಂಗ್‌ಗೆ ಒಂದು ಪಂದ್ಯದಲ್ಲಿ ವಿಶ್ರಾಂತಿ, ಮತ್ತೊಂದು ಪಂದ್ಯದಲ್ಲಿ ಅವಕಾಶ ನೀಡಿದೆ.
ರವಿವಾರ ನಡೆಯಲಿರುವ ಪಂದ್ಯದಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಶಮಿಗೆ ಮತ್ತೊಂದು ಅವಕಾಶ ನೀಡಬಹುದು.
ಇದೇ ಮೊದಲ ಬಾರಿ ಭಾರತ ಕ್ರಿಕೆಟ್ ಪ್ರವಾಸದಲ್ಲಿರುವ ಇಂಗ್ಲೆಂಡ್‌ನ ಉದಯೋನ್ಮುಖ ಆಟಗಾರರಾದ ಜೇಕಬ್ ಬೆಥೆಲ್ ಹಾಗೂ ಜಮಿ ಸ್ಮಿತ್ ವೈಫಲ್ಯ ಕಂಡಿದ್ದಾರೆ. ಹ್ಯಾರಿ ಬ್ರೂಕ್ ಶುಕ್ರವಾರ ಅರ್ಧಶತಕ ಗಳಿಸಿ ಕೊನೆಗೂ ದೊಡ್ಡ ಮೊತ್ತ ಗಳಿಸಿದ್ದರು. ಆದರೆ ಸ್ಪಿನ್ನರ್ ವಿರುದ್ಧ ಅದರಲ್ಲೂ ಮುಖ್ಯವಾಗಿ ಚಕ್ರವರ್ತಿ ವಿರುದ್ಧ ಔಟಾಗುವ ಸಮಸ್ಯೆಯು ಮುಂದುವರಿದಿದೆ.
►ಪಿಚ್ ರಿಪೋರ್ಟ್
ಪ್ರತಿಷ್ಠಿತ ವಾಂಖೆಡೆ ಸ್ಟೇಡಿಯಮ್ ಪಿಚ್ ಯಾವಾಗಲೂ ಬ್ಯಾಟರ್‌ಗಳ ಸ್ವರ್ಗವಾಗಿದ್ದು, ದೊಡ್ಡ ಸ್ಕೋರ್‌ಗಳಿಗೆ ಸಾಕ್ಷಿಯಾಗುತ್ತಾ ಬಂದಿದೆ. 8 ಪಂದ್ಯಗಳಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಮೊತ್ತ 191 ರನ್. ಪಿಚ್ ಆರಂಭದಲ್ಲಿ ವೇಗದ ಬೌಲರ್‌ಗಳಿಗೆ ನೆರವಾಗಲಿದ್ದು, ಗಮನಾರ್ಹ ಬೌನ್ಸ್ ಇರಲಿದೆ. ಮಧ್ಯಮ ಓವರ್‌ನಲ್ಲಿ ಬಿಗ್ ಹಿಟ್ಟರ್‌ಗಳನ್ನು ನಿಯಂತ್ರಿಸುವುದು ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ. ಕಿರಿದಾದ ಬೌಂಡರಿಗಳು ಬ್ಯಾಟರ್‌ಗಳು ದೊಡ್ಡ ಮೊತ್ತ ಗಳಿಸಲು ನೆರವಾಗಲಿದೆ. ಬೌಲರ್‌ಗಳು ಬೌನ್ಸ್‌ನಿಂದ ಲಾಭ ಪಡೆಯಲು ಪ್ರಯತ್ನಿಸಲಿದ್ದಾರೆ.
►ವಾಂಖೆಡೆ ಕ್ರೀಡಾಂಗಣದಲ್ಲಿ ಟಿ20 ಕ್ರಿಕೆಟ್‌ನ ಪ್ರಮುಖ ಅಂಕಿ-ಅಂಶ
ವಾಂಖೆಡೆ ಕ್ರೀಡಾಂಗಣವು ಹಲವಾರು ಪ್ರಮುಖ ಟಿ20 ದಾಖಲೆಗಳಿಗೆ ಸಾಕ್ಷಿಯಾಗಿದೆ. ರೋಹಿತ್ ಶರ್ಮಾ ಈ ಮೈದಾನದಲ್ಲಿ ಗರಿಷ್ಟ ಸ್ಕೋರ್(85 ಪಂದ್ಯಗಳು, 2445 ರನ್)ಗಳಿಸಿದ್ದರು. ಲಸಿತ್ ಮಾಲಿಂಗ(43 ಪಂದ್ಯ, 68 ವಿಕೆಟ್)ಗರಿಷ್ಟ ವಿಕೆಟ್ ಪಡೆದಿದ್ದಾರೆ.
ಭಾರತ ತಂಡವು 2019ರಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 240 ರನ್ ಗಳಿಸಿತ್ತು.
ಭಾರತ(ಸಂಭಾವ್ಯ): ಸಂಜು ಸ್ಯಾಮ್ಸನ್(ವಿಕೆಟ್‌ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್(ನಾಯಕ), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಷ್ಣೋಯಿ, ವರುಣ್ ಚಕ್ರವರ್ತಿ
ಇಂಗ್ಲೆಂಡ್ : ಜೋಸ್ ಬಟ್ಲರ್(ನಾಯಕ), ಹ್ಯಾರಿ ಬ್ರೂಕ್(ಉಪ ನಾಯಕ), ಫಿಲ್ ಸಾಲ್ಟ್(ವಿಕೆಟ್‌ಕೀಪರ್), ಬೆನ್ ಡಕೆಟ್, ಲಿಯಾಮ್ ಲಿವಿಂಗ್‌ಸ್ಟೋನ್, ಜಮಿ ಸ್ಮಿತ್, ಜಮಿ ಓವರ್ಟನ್, ಬ್ರೆಂಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
ಪಂದ್ಯ ಆರಂಭದ ಸಮಯ: ರಾತ್ರಿ 7:00