×
Ad

ಐದು ಶತಕ ಗಳಿಸಿದರೂ ಟೆಸ್ಟ್ ಪಂದ್ಯ ಸೋತ ಮೊದಲ ತಂಡ ಭಾರತ

Update: 2025-06-25 20:20 IST

PC : PTI 

ಲೀಡ್ಸ್: ಐದು ಶತಕಗಳನ್ನು ಗಳಿಸಿದ ಹೊರತಾಗಿಯೂ ಪಂದ್ಯವನ್ನು ಸೋತಿರುವ ಮೊದಲ ತಂಡ ಎನಿಸಿಕೊಂಡಿರುವ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅನಪೇಕ್ಷಿತ ದಾಖಲೆ ನಿರ್ಮಿಸಿದೆ. ಈ ತನಕ ನಾಲ್ಕಕ್ಕಿಂತ ಹೆಚ್ಚು ವೈಯಕ್ತಿಕ ಶತಕಗಳನ್ನು ಗಳಿಸಿದ ತಂಡವು ಟೆಸ್ಟ್ ಪಂದ್ಯವನ್ನು ಸೋತಿಲ್ಲ. ಈ ಹಿಂದೆ 1928ರಲ್ಲಿ ಮೆಲ್ಬರ್ನ್‌ ನಲ್ಲಿ ಮಾತ್ರ ಆಸ್ಟ್ರೇಲಿಯ ತಂಡವು ಇಂಗ್ಲೆಂಡ್ ವಿರುದ್ಧ 4 ಶತಕಗಳನ್ನು ಗಳಿಸಿದ್ದರೂ ಪಂದ್ಯವನ್ನು ಸೋತಿತ್ತು.

ಭಾರತ ಕ್ರಿಕೆಟ್ ತಂಡವು ಹೆಡ್ಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ ಒಟ್ಟು 835 ರನ್ ಗಳಿಸಿದ್ದು, ಪುರುಷರ ಟೆಸ್ಟ್ ಕ್ರಿಕೆಟ್‌ ನಲ್ಲಿ ಗರಿಷ್ಠ ರನ್ ಗಳಿಸಿದ ಹೊರತಾಗಿಯೂ ಪಂದ್ಯವನ್ನು ಸೋತ 4ನೇ ತಂಡ ಎನಿಸಿಕೊಂಡಿದೆ. ಭಾರತ ತಂಡವು ಈ ಹಿಂದೆ 2014ರಲ್ಲಿ ಅಡಿಲೇಡ್ ನಲ್ಲಿ ಆಸ್ಟ್ರೇಲಿಯ ತಂಡದ ವಿರುದ್ಧ ಒಟ್ಟು 759 ರನ್ ಗಳಿಸಿದ್ದರೂ ಪಂದ್ಯವನ್ನು ಸೋತಿತ್ತು.

ಹೆಡ್ಡಿಂಗ್ಲೆಯಲ್ಲಿ ಮಂಗಳವಾರ ಕೊನೆಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 371 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದ ಇಂಗ್ಲೆಂಡ್ ತಂಡವು 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಮಿಂಚಿನ ವೇಗದಲ್ಲಿ 149 ರನ್ ಗಳಿಸಿದ ಆರಂಭಿಕ ಬ್ಯಾಟರ್ ಬೆನ್ ಡಕೆಟ್ ಗೆಲುವಿನ ರೂವಾರಿಯಾದರು.

ಡಕೆಟ್ ಅವರು ಆರಂಭಿಕ ಜೊತೆಗಾರ ಝ್ಯಾಕ್ ಕ್ರಾಲಿ (65 ರನ್) ಅವರೊಂದಿಗೆ ಮೊದಲ ವಿಕೆಟ್‌ಗೆ 188 ರನ್ ಜೊತೆಯಾಟ ನಡೆಸಿದರು. ಈ ಇಬ್ಬರು ಬ್ಯಾಟರ್‌ಗೆ ಜೀವದಾನ ಕೂಡ ಲಭಿಸಿತ್ತು. ಕ್ರಾಲಿ 42 ರನ್ ಗಳಿಸಿದ್ದಾಗ, ಡಕೆಟ್ 97 ರನ್ ಗಳಿಸಿದ್ದಾಗ ಔಟಾಗುವುದರಿಂದ ಬಚಾವಾದರು. ಭಾರತವು ಫೀಲ್ಡಿಂಗ್ ಲೋಪಕ್ಕೆ ಬೆಲೆ ತೆರಬೇಕಾಯಿತು.

ಎಜ್‌ ಬಾಸ್ಟನ್‌ನಲ್ಲಿ ಜುಲೈ 2ರಿಂದ ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಭಾರತ ತಂಡವು ಆಡುವ 11ರ ಬಳಗದಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದು, ಸ್ಪಿನ್ನರ್ ಕುಲದೀಪ್ ಯಾದವ್ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News