19 ವರ್ಷದೊಳಗಿನವರ ಕ್ರಿಕೆಟ್ ಪಂದ್ಯದಲ್ಲಿ ಸೋತ ದ. ಆಫ್ರಿಕಾ ತಂಡದವರನ್ನು ಸಂತೈಸಿ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದ ಭಾರತ ತಂಡದ ನಾಯಕ
Photo: twitter.com/_FaridKhan
ಬೆನೋನಿ (ದಕ್ಷಿಣ ಆಫ್ರಿಕಾ): 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ತಂಡದ ಎದುರು ಪರಾಭವಗೊಂಡು ದುಃಖತಪ್ತರಾಗಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ಜುವಾನ್ ಜೇಮ್ಸ್ ಅವರನ್ನು ಅಪ್ಪಿಕೊಂಡು ಸಂತೈಸುವ ಮೂಲಕ, ಭಾರತ ಕ್ರಿಕೆಟ್ ತಂಡದ ನಾಯಕ ಉದಯ್ ಸಹರಣ್ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ ಎಂದು ndtv.com ವರದಿ ಮಾಡಿದೆ.
ಮಂಗಳವಾರ ನಡೆದ ಸೆಮಿಫೈನಲ್ ನ ರೋಚಕ ಹಣಾಹಣಿಯಲ್ಲಿ ಭಾರತ ತಂಡವು ಎರಡು ವಿಕೆಟ್ ಗಳ ರೋಚಕ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿತು. ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ಒಡ್ಡಿದ್ದ 245 ರನ್ ಗಳ ಗುರಿಯನ್ನು ನಾಯಕ ಉದಯ್ ಸಹರಣ್ (81) ಹಾಗೂ ಸಚಿನ್ ದಾಸ್ (96) ಅವರ ಅಮೋಘ ಜೊತೆಯಾಟದ ಬಲದಿಂದ ಭಾರತ ತಂಡವು ಯಶಸ್ವಿಯಾಗಿ ದಾಟಿತು. ಹಿರಿಯರ ದಕ್ಷಿಣ ಆಫ್ರಿಕಾ ತಂಡದಂತೆಯೆ, ಕಿರಿಯರ ತಂಡವೂ ಸೆಮಿಫೈನಲ್ ಹಂತವನ್ನು ದಾಟುವಲ್ಲಿ ಮತ್ತೆ ವಿಫಲವಾಯಿತು.
ಪಂದ್ಯ ಮುಕ್ತಾಯಗೊಂಡ ನಂತರ ಪರಾಭವಗೊಂಡಿದ್ದ ದಕ್ಷಿಣ ಆಫ್ರಿಕಾ ತಂಡದ ಆಟಗಾರರ ಕಣ್ಣುಗಳು ತುಂಬಿ ಬಂದಿದ್ದವು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಜುವಾನ್ ಜೇಮ್ಸ್ ರತ್ತ ಧಾವಿಸಿದ ಭಾರತ ತಂಡದ ನಾಯಕ ಉದಯ್ ಸಹರಣ್, ಅವರನ್ನು ತಬ್ಬಿಕೊಂಡು ಸಂತೈಸುವ ಮೂಲಕ ಕ್ರೀಡಾ ಸ್ಫೂರ್ತಿಯನ್ನು ಮೆರೆದರು. ಅವರ ಈ ವರ್ತನೆಯು ಕ್ರೀಡಾಂಗಣದಲ್ಲಿ ನೆರೆದಿದ್ದ ಕ್ರಿಕೆಟ್ ಪ್ರೇಮಿಗಳ ಮನ ಸೂರೆಗೊಂಡಿತು.