ವಿಂಡೀಸ್ ಮೇಲೆ ಫಾಲೋ-ಆನ್ ಹೇರಿದ ಭಾರತ | 2ನೇ ಇನಿಂಗ್ಸ್ ನಲ್ಲಿ ಪ್ರವಾಸಿಗರಿಂದ ತೀವ್ರ ಪ್ರತಿರೋಧ; ಕ್ಯಾಂಬೆಲ್, ಹೋಪ್ ಅರ್ಧ ಶತಕ
Photo Credit: PTI
ಹೊಸದಿಲ್ಲಿ, ಅ. 12: ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯದ ಮೂರನೇ ದಿನವಾದ ರವಿವಾರ ಭಾರತ ವೆಸ್ಟ್ ಇಂಡೀಸ್ ಮೇಲೆ ಫಾಲೋ-ಆನ್ ಹೇರಿದೆ.
ಭಾರತದ ಮೊದಲ ಇನಿಂಗ್ಸ್ ಮೊತ್ತ 518 ರನ್‌ಗಳಿಗೆ ಉತ್ತರಿಸಿದ ವೆಸ್ಟ್ ಇಂಡಿಸ್ ತನ್ನ ಮೊದಲ ಇನಿಂಗ್ಸ್‌ನಲ್ಲಿ 248 ರನ್ ಗಳನ್ನು ಗಳಿಸಿತು. ಬಳಿಕ ಅದು ದ್ವಿತೀಯ ಇನಿಂಗ್ಸ್ ನಲ್ಲಿ ಮೂರನೇ ದಿನದಾಟದ ಮುಕ್ತಾಯದ ವೇಳೆಗೆ ಎರಡು ವಿಕೆಟ್ ಗಳ ನಷ್ಟಕ್ಕೆ 173 ರನ್ ಗಳನ್ನು ಗಳಿಸಿತು. ಅದು ಈಗಲೂ 97 ರನ್‌ಗಳ ಹಿನ್ನಡೆಯಲ್ಲಿದೆ. ಅಂದರೆ ಇನಿಂಗ್ಸ್ ಸೋಲನ್ನು ತಪ್ಪಿಸಲು ಅದು ಇನ್ನೂ 97 ರನ್ ಗಳನ್ನು ಮಾಡಬೇಕಾಗಿದೆ.
ಆರಂಭಿಕ ಜಾನ್ ಕ್ಯಾಂಬೆಲ್ ರ ಅಜೇಯ 87 ಮತ್ತು ಶಾಯ್ ಹೋಪ್ ರ ಅಜೇಯ 66 ರನ್‌ಗಳ ನೆರವಿನಿಂದ ವೆಸ್ಟ್ ಇಂಡೀಸ್ ತನ್ನ ದ್ವಿತೀಯ ಇನಿಂಗ್ಸ್‌ನಲ್ಲಿ ತೀವ್ರ ಪ್ರತಿರೋಧ ತೋರಿತು. ಇವರಿಬ್ಬರು ಮುರಿಯದ ಮೂರನೇ ವಿಕೆಟ್‌ಗೆ 138 ರನ್‌ಗಳನ್ನು ಸೇರಿಸಿದರು.
ವೆಸ್ಟ್ ಇಂಡೀಸ್ ನ ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್‌ಗಳ ಗೊಂಚಲನ್ನು ಪಡೆದ ಭಾರತೀಯ ಸ್ಪಿನ್ನರ್ ಕುಲದೀಪ್ ಯಾದವ್, ಎದುರಾಳಿ ಬ್ಯಾಟರ್‌ಗಳ ಮೇಲೆ ಸವಾರಿ ಮಾಡಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಐದನೇ ಐದು ವಿಕೆಟ್ ಗೊಂಚಲಾಗಿದೆ. ಅವರು 82 ರನ್‌ಗಳನ್ನು ಕೊಟ್ಟು ಐದು ವಿಕೆಟ್ ಉರುಳಿಸಿದರು. ಅವರ ಪ್ರಯತ್ನದ ಫಲವಾಗಿ ವೆಸ್ಟ್ ಇಂಡೀಸ್‌ನ ಮೊದಲ ಇನಿಂಗ್ಸ್ 248 ರನ್‌ಗೆ ಮುಕ್ತಾಯಗೊಂಡಿತು.
ರವಿವಾರ ಬೆಳಗ್ಗೆ ನಾಲ್ಕು ವಿಕೆಟ್ ನಷ್ಟಕ್ಕೆ 140 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ವೆಸ್ಟ್ ಇಂಡೀಸ್ ಯಾವತ್ತೂ ಭಾರತಕ್ಕೆ ಸವಾಲು ಒಡ್ಡುವ ಮಟ್ಟಕ್ಕೆ ತಲುಪಲಿಲ್ಲ.
ಅದರ ಎರಡನೇ ಇನಿಂಗ್ಸ್ ನಲ್ಲಿ ಕ್ಯಾಂಬೆಲ್ ಮತ್ತು ಹೋಪ್ ಬಾರಿಸಿದ ಅರ್ಧ ಶತಕಗಳು, ಈ ಸರಣಿಯಲ್ಲಿ ಅದರ ಬ್ಯಾಟರ್‌ಗಳ ಮೊದಲ ಅರ್ಧ ಶತಕಗಳಾಗಿವೆ.
ಭಾರತದ ಗೆಲುವು ಖಚಿತವಾದರೂ ಈ ಇಬ್ಬರು ಬ್ಯಾಟರ್‌ಗಳ ಪ್ರತಿರೋಧವು ವೆಸ್ಟ್ ಇಂಡೀಸ್ ಪಾಳಯದಲ್ಲಿ ಕೊಂಚ ಆತ್ಮವಿಶ್ವಾಸವನ್ನು ಹುಟ್ಟಿಸಿದೆ.
ವೆಸ್ಟ್ ಇಂಡೀಸ್‌ನ ಎರಡನೇ ಇನಿಂಗ್ಸ್‌ನ ಆರಂಭವೂ ದುರ್ಬಲವಾಗಿತ್ತು. 35 ರನ್‌ಗಳನ್ನು ಗಳಿಸುವಷ್ಟರಲ್ಲಿ ಅದು ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ತನ್ನ ಆಟದ ಶೈಲಿಯನ್ನು ಬದಲಿಸಿದ ಕ್ಯಾಂಬೆಲ್ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜ ಮತ್ತು ಕುಲದೀಪ್ ಯಾದವ್‌ರ ವಿರುದ್ಧ ಆಕ್ರಮಣಕಾರಿ ಧೋರಣೆ ಅನುಸರಿಸಿದರು. ಅದೇ ಮಾದರಿಯನ್ನು ಹೋಪ್ ಕೂಡ ಅನುಸರಿಸಿದರು.