×
Ad

ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮಡಿದವರಿಗೆ ಭಾರತ-ಇಂಗ್ಲೆಂಡ್ ಆಟಗಾರರಿಂದ ಶ್ರದ್ಧಾಂಜಲಿ

Update: 2025-06-20 21:03 IST

Image: England Cricket/X

ಲೀಡ್ಸ್: ಭಾರತ-ಇಂಗ್ಲೆಂಡ್ ಕ್ರಿಕೆಟ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದ ಆರಂಭಕ್ಕೂ ಮೊದಲು ಮೈದಾನದ ಅಂಪೈರ್‌ ಗಳು ಸೇರಿದಂತೆ ಉಭಯ ತಂಡಗಳ ಆಟಗಾರರು ಒಂದು ನಿಮಿಷ ಮೌನಾಚರಣೆ ಮೂಲಕ ಇತ್ತೀಚೆಗೆ ಅಹ್ಮದಾಬಾದ್ ವಿಮಾನ ದುರಂತದಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು. ಅಲ್ಲದೆ ಮೃತರ ಗೌರವಾರ್ಥ ಆಟಗಾರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಮೈದಾನಕ್ಕೆ ಇಳಿದರು.

ಜೂನ್ 12ರಂದು ಅಹ್ಮದಾಬಾದ್‌ ನಿಂದ ಲಂಡನ್‌ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲ ಹೊತ್ತಿನಲ್ಲೇ ಪತನಗೊಂಡಿತ್ತು. ಈ ಘಟನೆಯಲ್ಲಿ ವಿಮಾನದಲ್ಲಿದ್ದ 181 ಭಾರತೀಯರು ಹಾಗೂ 53 ಬ್ರಿಟನ್ ಪ್ರಜೆಗಳು ಸಹಿತ 241 ಮಂದಿ ಸಾವನ್ನಪ್ಪಿದ್ದರು.

‘ಲೀಡ್ಸ್‌ ನ ಹೆಡ್ಡಿಂಗ್ಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನದಾಟ ಆರಂಭವಾಗುವ ಮೊದಲು ಅಹ್ಮದಾಬಾದ್ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಸ್ಮರಣಾರ್ಥ ಭಾರತ ಕ್ರಿಕೆಟ್ ತಂಡ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡ ಮೌನಾಚರಣೆ ನಡೆಸಿದವು ಎಂದು ಬಿಸಿಸಿಐ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.

ದುರಂತದಲ್ಲಿ ಜೀವ ಕಳೆದುಕೊಂಡ ಎಲ್ಲರ ಕುಟುಂಬ ಹಾಗೂ ಸ್ನೇಹಿತರಿಗೆ ಉಭಯ ತಂಡಗಳು ತೀವ್ರ ಸಂತಾಪ ವ್ಯಕ್ತಪಡಿಸುತ್ತವೆ ಎಂದು ಬಿಸಿಸಿಐ ತಿಳಿಸಿದೆ.

‘‘ಕಳೆದ ವಾರ ಅಹ್ಮದಾಬಾದ್‌ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸುವ ಸಂಕೇತವಾಗಿ ಟೆಸ್ಟ್ ಪಂದ್ಯದ ಮೊದಲ ದಿನದಂದು ಎರಡೂ ತಂಡಗಳು ಕಪ್ಪುಪಟ್ಟಿಗಳನ್ನು ಧರಿಸಲಿವೆ. ಆಯಾ ರಾಷ್ಟ್ರಗೀತೆಗಳಿಗೆ ಮೊದಲು ಒಂದುಕ್ಷಣ ಮೌನ ಆಚರಿಸಲಾಗುವುದು’’ಎಂದು ಪಂದ್ಯ ಆರಂಭಕ್ಕೂ ಮೊದಲು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News