×
Ad

ಎರಡನೇ ಟೆಸ್ಟ್ ನಲ್ಲಿ ಭಾರತಕ್ಕೆ ಏಳು ವಿಕೆಟ್ ಗಳ ಜಯ

ವೆಸ್ಟ್ ಇಂಡೀಸ್ ನ ವಿರುದ್ಧ ಕ್ಲೀನ್ ಸ್ವೀಪ್

Update: 2025-10-14 10:57 IST
PC | ANI

ಹೊಸದಿಲ್ಲಿ: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 7 ವಿಕೆಟ್‌ಗಳ ಅಂತರದಿಂದ ಜಯಶಾಲಿಯಾಗಿರುವ ಟೀಮ್ ಇಂಡಿಯಾವು ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ವಿರುದ್ಧ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡು ಕ್ಲೀನ್‌ಸ್ವೀಪ್ ಸಾಧಿಸಿದೆ. ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ಮೊದಲ ಸರಣಿಯನ್ನು ಗೆದ್ದಿದ್ದಾರೆ.

ಆತಿಥೇಯ ಭಾರತಕ್ಕೆ ಐದನೇ ಹಾಗೂ ಕೊನೆಯ ದಿನವಾದ ಮಂಗಳವಾರ 121 ರನ್ ಗೆಲುವಿನ ಗುರಿ ತಲುಪಲು ಕೇವಲ 58 ರನ್ ಅಗತ್ಯವಿತ್ತು. ಒಂದು ಗಂಟೆಯಲ್ಲಿ ಗೆಲುವಿನ ವಿಧಿ ವಿಧಾನ ಪೂರೈಸಿದ ಭಾರತ ತಂಡದ ಪರ ಕೆ.ಎಲ್.ರಾಹುಲ್ 58 ರನ್ ಗಳಿಸಿದರು. ಭಾರತವು ಎರಡೂ ಟೆಸ್ಟ್ ಪಂದ್ಯಗಳಲ್ಲಿ ಎದುರಾಳಿಯ ವಿಂಡೀಸ್‌ನ ಎಲ್ಲ 40 ವಿಕೆಟ್‌ಗಳನ್ನು ಉರುಳಿಸಿದೆ.

ಕೆ.ಎಲ್.ರಾಹುಲ್ ಅವರು ಧ್ರುವ ಜುರೆಲ್(6 ರನ್)ಅವರೊಂದಿಗೆ ಕೊನೆಯ ದಿನದಾಟದಲ್ಲಿ 35.2 ಓವರ್‌ಗಳಲ್ಲಿ ಗುರಿ ತಲುಪಿದರು. ಸಾಯಿ ಸುದರ್ಶನ್(39 ರನ್)ಅವರೊಂದಿಗೆ ಎರಡನೇ ವಿಕೆಟ್‌ಗೆ ನಿರ್ಣಾಯಕ 79 ರನ್ ಜೊತೆಯಾಟ ನಡೆಸಿದ ರಾಹುಲ್ ಅವರ 108 ಎಸೆತಗಳ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು.

ಶತಕಗಳನ್ನು ಗಳಿಸಿ 10ನೇ ವಿಕೆಟ್‌ಗೆ 177 ರನ್ ಜೊತೆಯಾಟ ನಡೆಸಿ ಒಂದಷ್ಟು ಪ್ರತಿರೋಧ ಒಡ್ಡಿದ ಜಾನ್ ಕ್ಯಾಂಪ್‌ಬೆಲ್(115 ರನ್)ಹಾಗೂ ಶಾಯ್ ಹೋಪ್(103 ರನ್) ದ್ವಿತೀಯ ಟೆಸ್ಟ್ ಪಂದ್ಯವು 5ನೇ ದಿನದ ತನಕ ವಿಸ್ತರಿಸಲು ಕಾರಣರಾದರು. ಜಸ್ಟಿನ್ ಗ್ರೀವ್ಸ್ ಹಾಗೂ ಜೇಡನ್ ಸೀಲ್ಸ್ ಕೊನೆಯ ವಿಕೆಟ್‌ನಲ್ಲಿ 79 ರನ್ ಜೊತೆಯಾಟ ನಡೆಸಿ ಭಾರತಕ್ಕೆ ನಿರಾಶೆಗೊಳಿಸಿದರು. ಫಿರೋಝ್ ಶಾ ಕೋಟ್ಲಾ ಸ್ಟೇಡಿಯಂ ಪಂದ್ಯದುದ್ದಕ್ಕೂ ಪಿಚ್ ನಿಧಾನಗತಿಯಲ್ಲಿ ವರ್ತಿಸುತ್ತಾ ಬಂದಿದ್ದು, ಸ್ಪಿನ್ನರ್‌ಗಳಿಗೆ ನೆರವಾಗುತ್ತಾ ಬಂದಿದೆ.

ಈ ಸೋಲಿನ ಮೂಲಕ ವೆಸ್ಟ್‌ಇಂಡೀಸ್ ತಂಡವು ಸತತ 2ನೇ ಬಾರಿ ಕ್ಲೀನ್‌ಸ್ವೀಪ್‌ಗೆ ಒಳಗಾಗಿದೆ. ಈ ಹಿಂದೆ ಸ್ವದೇಶದಲ್ಲಿ ಆಸ್ಟ್ರೇಲಿಯ ವಿರುದ್ಧ 0-3 ಅಂತರದಿಂದ ಸರಣಿ ಸೋತಿತ್ತು.

ಭಾರತೀಯ ಬೌಲರ್‌ಗಳು ಎರಡೂ ಟೆಸ್ಟ್ ಪಂದ್ಯಗಳಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದು, ಸವಾಲಿನ ಪಿಚ್‌ನಲ್ಲಿ ವೇಗಿಗಳು ಉತ್ತಮ ಕೊಡುಗೆ ನೀಡಿದ್ದಾರೆ. ಕೋಟ್ಲಾದಲ್ಲಿ ಪಿಚ್‌ನ ಪರಿಸ್ಥಿತಿಯು ತಮಗೆ ಕಠಿಣವಾಗಿ ಪರಿಣಮಿಸಿದಾಗ ಸ್ಪಿನ್ನರ್‌ಗಳು ತಾಳ್ಮೆ ಪ್ರದರ್ಶಿಸಿದರು.

ಕುಲದೀಪ್ ಒಟ್ಟು 12 ವಿಕೆಟ್‌ಗಳನ್ನು ಪಡೆದು ಮಿಂಚಿದರು. 10 ವಿಕೆಟ್‌ಗಳನ್ನು ಕಬಳಿಸಿರುವ ಮುಹಮ್ಮದ್ ಸಿರಾಜ್ ಈ ವರ್ಷ 8 ಪಂದ್ಯಗಳಲ್ಲಿ 37 ವಿಕೆಟ್‌ಗಳನ್ನು ಉರುಳಿಸಿ ಭಾರತದ ಪರ ಗರಿಷ್ಠ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದರು.

ಭಾರತೀಯ ಬ್ಯಾಟಿಂಗ್ ಸರದಿಯು ಐದು ಶತಕಗಳ ಮೂಲಕ ತಮ್ಮ ಪ್ರಾಬಲ್ಯ ತೋರಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್(175 ರನ್)ಹಾಗೂ ಗಿಲ್ (ಔಟಾಗದೆ 129 ರನ್)ಶತಕಗಳ ಬಲದಿಂದ 5 ವಿಕೆಟ್‌ಗಳ ನಷ್ಟಕ್ಕೆ 518 ರನ್ ಗಳಿಸಿದೆ. ವೆಸ್ಟ್‌ಇಂಡೀಸ್ ತಂಡ ವೇಗಿ ಅಲ್ಝಾರಿ ಜೋಸೆಫ್ ಹಾಗೂ ಶಮರ್ ಜೋಸೆಫ್‌ರಿಂದ ವಂಚಿತವಾಗಿದ್ದು, ಭಾರತದ ಬ್ಯಾಟರ್‌ಗಳನ್ನು ಕಟ್ಟಿ ಹಾಕುವಲ್ಲಿ ವಿಫಲವಾಯಿತು. ಎರಡೂ ಪಂದ್ಯಗಳಲ್ಲಿ ಅಗ್ರ-6 ಬ್ಯಾಟರ್‌ಗಳು 90 ಸ್ಕೋರ್ ಸನಿಹ ತಲುಪಿದರು.

ಮೊದಲ ಇನಿಂಗ್ಸ್‌ನಲ್ಲಿ 248 ರನ್‌ಗೆ ಆಲೌಟಾಗಿ 270 ರನ್ ಹಿನ್ನಡೆಯೊಂದಿಗೆ ಫಾಲೋ ಆನ್‌ಗೆ ಸಿಲುಕಿದ ನಂತರ ವೆಸ್ಟ್‌ಇಂಡೀಸ್ ತಂಡವು ತನ್ನ 2ನೇ ಇನಿಂಗ್ಸ್‌ನಲ್ಲಿ ಒಂದಷ್ಟು ಪ್ರತಿರೋಧ ತೋರಿತು.

ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಸಹಿತ ಒಟ್ಟು 8 ವಿಕೆಟ್‌ಗಳನ್ನು ಕಬಳಿಸಿರುವ ಕುಲದೀಪ ಯಾದವ್ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು. ಅಮೋಘ ಆಲ್‌ರೌಂಡ್ ಪ್ರದರ್ಶನ ನೀಡಿರುವ ರವೀಂದ್ರ ಜಡೇಜ ‘ಸರಣಿಶ್ರೇಷ್ಠ‘ ಪ್ರಶಸ್ತಿಗೆ ಆಯ್ಕೆಯಾದರು.

ವೆಸ್ಟ್‌ಇಂಡೀಸ್ ತಂಡದ ಅಗ್ರ ಸರದಿಯ ಬ್ಯಾಟರ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ 35ಕ್ಕಿಂತ ಕಡಿಮೆ ಸರಾಸರಿ ಕಾಯ್ದುಕೊಂಡಿರುವ ಕಾರಣ ಭಾರತ ತಂಡ ಸರಣಿಯನ್ನು ಸುಲಭವಾಗಿ ಗೆದ್ದುಕೊಂಡಿತು. ವೆಸ್ಟ್‌ಇಂಡೀಸ್ ಬೌಲಿಂಗ್ ವಿಭಾಗದಲ್ಲಿ ಜೇಡನ್ ಸೀಲ್ಸ್ ಹೊರತುಪಡಿಸಿ ಉಳಿದವರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಸಾಕಷ್ಟು ಅನುಭವವಿಲ್ಲ.

ರೋಸ್ಟನ್ ಚೇಸ್ ಅವರು ಕ್ರೆಗ್ ಬ್ರಾತ್‌ವೇಟ್ ನಂತರ ನಾಯಕನಾಗಿ ಮೊದಲ 5 ಟೆಸ್ಟ್ ಪಂದ್ಯಗಳನ್ನು ಸೋತಿರುವ ವೆಸ್ಟ್‌ಇಂಡೀಸ್ ತಂಡದ 2ನೇ ಆಟಗಾರನಾಗಿದ್ದಾರೆ.

ಭಾರತ ತಂಡ ಮುಂದಿನ ತಿಂಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಈಗ ದಕ್ಷಿಣ ಆಫ್ರಿಕ ಹಾಗೂ ಪಾಕಿಸ್ತಾನದ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲೆರಡು ದಿನಗಳಲ್ಲಿ ಉರುಳಿರುವ 16 ವಿಕೆಟ್‌ಗಳ ಪೈಕಿ 15 ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ಪಡೆದಿದ್ದಾರೆ.

ಮರ್ಕ್ರಮ್, ರಿಯಾನ್ ರಿಕೆಲ್ಟನ್ ಹಾಗೂ ಡೆವಾಲ್ಟ್ ಬ್ರೆವಿಸ್ ಅವರನ್ನೊಳಗೊಂಡ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್ ಸರದಿಯು ವೆಸ್ಟ್‌ಇಂಡೀಸ್ ತಂಡಕ್ಕಿಂತ ಹೆಚ್ಚು ಬಲಿಷ್ಠವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News