ನ್ಯೂಝಿಲ್ಯಾಂಡ್ ವಿರುದ್ಧ ಮೂರನೇ ಟೆಸ್ಟ್ | ಭಾರತ ಕ್ರಿಕೆಟ್ ತಂಡಕ್ಕೆ ಹರ್ಷಿತ್ ರಾಣಾ ಸೇರ್ಪಡೆ
ಹರ್ಷಿತ್ ರಾಣಾ | PC: X \ @KkrKaravan
ಹೊಸದಿಲ್ಲಿ : ದಿಲ್ಲಿ ತಂಡದ ಮುಂದಿನ ರಣಜಿ ಟ್ರೋಫಿ ಪಂದ್ಯಕ್ಕೆ ಹರ್ಷಿತ್ ರಾಣಾ ಲಭ್ಯವಿರುವುದಿಲ್ಲ. ನವೆಂಬರ್ 1ರಿಂದ ನ್ಯೂಝಿಲ್ಯಾಂಡ್ ವಿರುದ್ಧ ಮುಂಬೈನಲ್ಲಿ ಆರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯಕ್ಕೆ ಭಾರತದ ಟೆಸ್ಟ್ ತಂಡವನ್ನು ಸೇರಿಕೊಳ್ಳುವಂತೆ ಆಲ್‌ರೌಂಡರ್ ರಾಣಾಗೆ ತಿಳಿಸಲಾಗಿದೆ.
ದಿಲ್ಲಿ ರಣಜಿ ತಂಡದ ಮ್ಯಾನೇಜ್‌ಮೆಂಟ್‌ಗೆ ನಿರ್ಧಾರವನ್ನು ತಿಳಿಸಲಾಗಿದ್ದು, ನಾಲ್ಕನೇ ಸುತ್ತಿನ ಪಂದ್ಯದಲ್ಲಿ ದಿಲ್ಲಿ ತಂಡವು ಆಲ್ ರೌಂಡರ್ ರಾಣಾ ಸೇವೆಯಿಂದ ವಂಚಿತವಾಗಲಿದೆ.
ದಿಲ್ಲಿ ಹಾಗೂ ಅಸ್ಸಾಂ ನಡುವೆ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ರಣಜಿ ಪಂದ್ಯವನ್ನು ವೀಕ್ಷಿಸಲು ಹಿರಿಯ ಆಯ್ಕೆಗಾರ ಅಜಯ್ ರಾತ್ರಾ ತೆರಳಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದ ರಾಣಾ ನಿರ್ಣಾಯಕ ಅರ್ಧಶತಕ ಗಳಿಸಿದ್ದರು. ಅಸ್ಸಾಂ ತಂಡದ ಬ್ಯಾಟಿಂಗ್ ವೇಳೆ ಮತ್ತೊಮ್ಮೆ ಎರಡು ವಿಕೆಟ್‌ಗಳನ್ನು ಪಡೆದಿದ್ದರು. ದಿಲ್ಲಿಯ 10 ವಿಕೆಟ್‌ಗಳ ಸುಲಭ ಗೆಲುವಿನಲ್ಲಿ ಯುವ ಆಲ್ ರೌಂಡರ್ ಪ್ರಮುಖ ಪಾತ್ರವಹಿಸಿದ್ದರು.
ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ರಾಣಾ ಅವರು ಭಾರತೀಯ ತಂಡದಲ್ಲಿದ್ದರು. ಆದರೆ, ಅಸ್ಸಾಂ ವಿರುದ್ಧ ರಣಜಿ ಟ್ರೋಫಿ ಪಂದ್ಯವನ್ನು ಆಡಲು ರಾಣಾ ಅವರನ್ನು ಬಿಡುಗಡೆ ಮಾಡಲಾಗಿತ್ತು.
ರಾಣಾ ಅವರು ದೀರ್ಘ ಸಮಯದಿಂದ ಭಾರತೀಯ ಕ್ರಿಕೆಟ್ ತಂಡದೊಂದಿಗಿದ್ದಾರೆ. ಆದರೆ ಆಡುವ ಅವಕಾಶವನ್ನು ಪಡೆದಿರಲಿಲ್ಲ. ಅಜಿತ್ ಅಗರ್ಕರ್ ನೇತೃತ್ವದ ಸೀನಿಯರ್ ಆಯ್ಕೆ ಸಮಿತಿಯು 22ರ ಹರೆಯದ ರಾಣಾ ಮೇಲೆ ನಂಬಿಕೆ ಇಡುತ್ತಾ ಬಂದಿದೆ. ಮುಂದಿನ ತಿಂಗಳು ಆಸ್ಟ್ರೇಲಿಯದಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಭಾರತೀಯ ತಂಡದಲ್ಲಿ ರಾಣಾ ಅವರ ಹೆಸರಿದೆ.
ರಾಣಾಗೆ ಹೆಚ್ಚು ಪ್ರಥಮ ದರ್ಜೆ ಪಂದ್ಯವನ್ನಾಡಿದ ಅನುಭವವಿಲ್ಲ. ಆದರೆ ಆಯ್ಕೆಗಾರರು ರಾಣಾ ಅವರ ಆಲ್ ರೌಂಡ್ ಸಾಮರ್ಥ್ಯದ ಮೇಲೆ ಭರವಸೆ ಇರಿಸಿದ್ದಾರೆ. ಆಸ್ಟ್ರೇಲಿಯದ ವಾತಾವರಣದಲ್ಲಿ ರಾಣಾ ಉಪಯುಕ್ತರಾಗಲಿದ್ದಾರೆ ಎಂದು ನಂಬಲಾಗಿದೆ.
ಆಸ್ಟ್ರೇಲಿಯ ತಂಡದ ವಿರುದ್ಧ ಸವಾಲಿನ ಸರಣಿ ಆರಂಭವಾಗುವ ಮೊದಲು ಭಾರತೀಯ ಚಿಂತಕರ ಚಾವಡಿಯು ನ್ಯೂಝಿಲ್ಯಾಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ರಾಣಾ ಅವರಿಗೆ ಚೊಚ್ಚಲ ಪಂದ್ಯ ಆಡುವ ಅವಕಾಶ ನೀಡಿದರೂ ಅಚ್ವರಿಯಿಲ್ಲ.
ಬೆಂಗಳೂರು ಹಾಗೂ ಪುಣೆ ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿರುವ ನ್ಯೂಝಿಲ್ಯಾಂಡ್ ತಂಡವು ಈಗಾಗಲೇ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಮೂರನೇ ಟೆಸ್ಟ್ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.
*ನ್ಯೂಝಿಲ್ಯಾಂಡ್ ವಿರುದ್ಧ 3ನೇ ಟೆಸ್ಟ್‌ಗೆ ಭಾರತ ತಂಡ: ರೋಹಿತ್ ಶರ್ಮಾ(ನಾಯಕ), ಜಸ್‌ಪ್ರಿತ್ ಬುಮ್ರಾ(ಉಪ ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ಸರ್ಫರಾಝ್ ಖಾನ್, ರಿಷಭ್ ಪಂತ್(ವಿಕೆಟ್ ಕೀಪರ್), ಧ್ರುವ್ ಜುರೆಲ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಹಮ್ಮದ್ ಸಿರಾಜ್, ಆಕಾಶ್ ದೀಪ್, ಹರ್ಷಿತ್ ರಾಣಾ.