ಏಶ್ಯನ್ ಗೇಮ್ಸ್ ನಲ್ಲಿ ಮುಂದುವರೆದ ಭಾರತದ ಪದಕ ಬೇಟೆ; ಟೆನಿಸ್ ನಲ್ಲಿ ಬೆಳ್ಳಿ ಜಯಿಸಿದ ಸಾಕೇತ್-ರಾಮಕುಮಾರ್
ಸಾಕೇತ್ ಮೈನೇನಿ, ರಾಮಕುಮಾರ್ ರಾಮನಾಥನ್ | Photo: PTI
ಹಾಂಗ್‌ಝೌ: ಏಶ್ಯನ್ ಗೇಮ್ಸ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾಕೇತ್ ಮೈನೇನಿ ಹಾಗೂ ರಾಮಕುಮಾರ್ ರಾಮನಾಥನ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಶುಕ್ರವಾರ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಸಾಕೇತ್ ಹಾಗೂ ರಾಮಕುಮಾರ್ ಚೈನೀಸ್ ತೈಪೆಯ ಜುಂಗ್ ಜೇಸನ್ ಹಾಗೂ ಹ್ಸು ಯು-ಸಿಯು ವಿರುದ್ಧ 4-6, 4-6 ನೇರ ಸೆಟ್‌ಗಳ ಅಂತರದಿಂದ ಸೋತಿದ್ದಾರೆ.
ಪ್ರಸಕ್ತ ಏಶ್ಯನ್ ಗೇಮ್ಸ್‌ನಲ್ಲಿ ಭಾರತವು ಟೆನಿಸ್ ಸ್ಪರ್ಧೆಯಲ್ಲಿ ಮೊದಲ ಪದಕ ತನ್ನದಾಗಿಸಿಕೊಂಡಿದೆ.
ಇದೇ ವೇಳೆ ಮಿಕ್ಸೆಡ್ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಋತುಜಾ ಬೋಂಸ್ಲೆ ಕಝಖ್‌ಸ್ತಾನದ ಜೋಡಿ ಝ್ಹಿಬೆಕ್ ಕುಲಾಂಬಾಯೆವಾ ಹಾಗೂ ಗ್ರಿಗೊರಿ ಲಾಂಮಕಿನ್‌ರನ್ನು 7-5, 6-3 ನೇರ ಸೆಟ್‌ಗಳ ಅಂತರದಿಂದ ಸೋಲಿಸಿ ಕನಿಷ್ಠ ಕಂಚಿನ ಪದಕ ಖಚಿತಪಡಿಸಿದರು.
ಶಾಟ್‌ಪುಟ್‌ನಲ್ಲಿ ಕಿರಣ್ ಬಲಿಯನ್‌ಗೆ ಕಂಚು:
ಏಶ್ಯನ್ ಗೇಮ್ಸ್‌ನಲ್ಲಿ ಮಹಿಳೆಯರ ಶಾಟ್‌ಪುಟ್ ಫೈನಲ್‌ನಲ್ಲಿ ಕಿರಣ್ ಬಲಿಯನ್ 17.36 ಮೀ.ದೂರಕ್ಕೆ ಗುಂಡನ್ನು ಎಸೆದು ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು.
ಬಲಿಯನ್ ತನ್ನ 3ನೇ ಯತ್ನದಲ್ಲಿ ಈ ಸಾಧನೆ ಮಾಡಿದರು. ಚೀನಾದ ಲಿಜಿಯವೊ ಗೊಂಗ್ ಹಾಗೂ ಜಿಯಾಯುಯಾನ್ ಸಾಂಗ್ ಕ್ರಮವಾಗಿ 19.58 ಹಾಗೂ 18.92 ಮೀ.ದೂರಕ್ಕೆ ಶಾಟ್‌ಪುಟ್ ಎಸೆದು ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದುಕೊಂಡರು. ಮನ್‌ಪ್ರೀತ್ ಕೌರ್ (16.25)ಐದನೇ ಸ್ಥಾನ ಪಡೆದರು.
ಸ್ಕ್ವಾಷ್ ಪುರುಷರ ಟೀಮ್ - ಭಾರತ ಫೈನಲ್‌ಗೆ
ಸೌರವ್ ಘೋಷಾಲ್ ನೇತೃತ್ವದ ಭಾರತದ ಪುರುಷರ ಸ್ಕ್ವಾಷ್ ತಂಡ ಟೀಮ್ ಸ್ಪರ್ಧೆಯಲ್ಲಿ ಫೈನಲ್‌ನಲ್ಲಿ ಸ್ಥಾನ ಪಡೆದಿದೆ. ಮಲೇಶ್ಯ ವಿರುದ್ಧ ಸೆಮಿ ಫೈನಲ್‌ನಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸುವ ಮೂಲಕ ಭಾರತ ಈ ಸಾಧನೆ ಮಾಡಿದೆ. ಘೋಷಾಲ್ ಮಲೇಶ್ಯದ ಆಟಗಾರ ಯೊವ್ ವಿರುದ್ಧ 3-1 ಅಂತರದಿಂದ ಜಯ ಸಾಧಿಸಿದರು