ಮುಂಬೈ ತಂಡದ ಮುಂದಿನ ರಣಜಿ ಪಂದ್ಯಕ್ಕೆ ಯಶಸ್ವಿ ಜೈಸ್ವಾಲ್ ಲಭ್ಯ
ಯಶಸ್ವಿ ಜೈಸ್ವಾಲ್ | Photo Credit : PTI
ಮುಂಬೈ, ಅ.27: ರಾಜಸ್ಥಾನ ತಂಡದ ವಿರುದ್ಧ ಮುಂಬೈ ತಂಡ ಆಡಲಿರುವ ಮುಂದಿನ ರಣಜಿ ಟ್ರೋಫಿ ಪಂದ್ಯಕ್ಕೆ ತಾನು ಲಭ್ಯವಿದ್ದೇನೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಗೆ ಭಾರತದ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಕರ್ತವ್ಯದಲ್ಲಿಲ್ಲದಿರುವಾಗ ಎಲ್ಲ ಗುತ್ತಿಗೆ ಆಧರಿತ ಆಟಗಾರರು ದೇಶೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಬೇಕು ಎಂಬ ಬಿಸಿಸಿಐ ನಿರ್ದೇಶನವನ್ನು ಅನುಸರಿಸಿ, ಜೈಸ್ವಾಲ್ ನವೆಂಬರ್ 1ರಿಂದ ಆರಂಭವಾಗುವ ಪಂದ್ಯಕ್ಕಾಗಿ ಜೈಪುರದಲ್ಲಿ ಮುಂಬೈ ತಂಡವನ್ನು ಸೇರಿಕೊಳ್ಳಲಿದ್ದಾರೆ. ಮುಂಬೈ ತಂಡವು ಅಕ್ಟೋಬರ್ 30ರಂದು ನಗರವನ್ನು ತಲುಪುವ ನಿರೀಕ್ಷೆ ಇದೆ.
ಜೈಸ್ವಾಲ್ ಈ ವರ್ಷ ಮುಂಬೈ ತಂಡವನ್ನು ತೊರೆದು ಗೋವಾ ತಂಡವನ್ನು ಸೇರಲು ನಿರ್ಧರಿಸಿದ್ದು, ಎಂಸಿಎಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಕೇಳಿದ್ದರು. ಆನಂತರ ತನ್ನ ಮನಸ್ಸನ್ನು ಬದಲಿಸಿದ್ದರು. ಅಂತರರಾಷ್ಟ್ರೀಯ ಕ್ರಿಕೆಟ್ ಬದ್ಧತೆಯಿಂದಾಗಿ ಜೈಸ್ವಾಲ್ ಈ ವರ್ಷ ಈ ತನಕ ಯಾವುದೇ ದೇಶೀಯ ಕ್ರಿಕೆಟ್ ಆಡಿಲ್ಲ.