×
Ad

ಟಿ20 ವಿಶ್ವಕಪ್ ಜರ್ಸಿಯನ್ನು ಜಂಟಿಯಾಗಿ ಪ್ರದರ್ಶಿಸಿದ ಜಯ ಶಾ, ರೋಹಿತ್ ಶರ್ಮ

Update: 2024-05-13 22:57 IST

ಜಯ ಶಾ ,   ರೋಹಿತ್ ಶರ್ಮ | PC : X \ @BCCI 

ಅಹ್ಮದಾಬಾದ್ : ಭಾರತೀಯ ಕ್ರಿಕೆಟ್ ತಂಡದ ನೂತನ ಟಿ20 ವಿಶ್ವಕಪ್ ಜರ್ಸಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ಕಾರ್ಯದರ್ಶಿ ಜಯ ಶಾ ಮತ್ತು ತಂಡದ ನಾಯಕ ರೋಹಿತ್ ಶರ್ಮ ಸೋಮವಾರ ಜಂಟಿಯಾಗಿ ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಮ್‌ ನಲ್ಲಿ ಪ್ರದರ್ಶಿಸಿದ್ದಾರೆ.

‘‘ಇದು ನಮ್ಮ ತಂಡವನ್ನು ಹೊಸ ಬಣ್ಙಗಳಲ್ಲಿ ಸ್ವಾಗತಿಸುವ ಸಮಯ’’ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಾಕಿದ ವೀಡಿಯೊವೊಂದರಲ್ಲಿ ಬಿಸಿಸಿಐ ಹೇಳಿದೆ. ಪ್ರಖರ ಬಣ್ಣಗಳಿಂದ ಕೂಡಿದ ಜರ್ಸಿಯನ್ನು ನರೇಂದ್ರ ಮೋದಿ ಸ್ಟೇಡಿಯಮ್‌ ನಲ್ಲಿ ಜಯ ಶಾ ಮತ್ತು ರೋಹಿತ್ ಶರ್ಮ ಅನಾವರಣಗೊಳಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

‘‘ನಮ್ಮ ಗೌರವ ಕಾರ್ಯದರ್ಶಿ ಜಯ ಶಾ, ನಾಯಕ ರೋಹಿತ್ ಶರ್ಮ ಮತ್ತು ಅಧಿಕೃತ ಕಿಟ್ ಭಾಗೀದಾರ ಅಡಿಡಸ್ ಜೊತೆಗೆ ನೂತನ ಟಿ20ಐ ಟೀಮ್ ಇಂಡಿಯಾ ಜರ್ಸಿಯನ್ನು ಸಾದರಪಡಿಸುತ್ತಿದ್ದೇವೆ’’ ಎಂದು ಬಿಸಿಸಿಐ ಬರೆದಿದೆ.

ಜರ್ಸಿಯ ಅನಾವರಣವು ಮೇ 6ರಂದು ನಡೆದಿತ್ತು. ರೋಹಿತ್ ಶರ್ಮ, ಆಲ್ರೌಂಡರ್ ರವೀಂದ್ರ ಜಡೇಜ ಮತ್ತು ಹಿರಿಯ ಸ್ಪಿನ್ನರ್ ಕುಲದೀಪ್ ಯಾದವ್ ರನ್ನು ಒಳಗೊಂಡ ವೀಡಿಯೊವೊಂದನ್ನು ಬಿಸಿಸಿಐಯ ಅಧಿಕೃತ ಕಿಟ್ ಪ್ರಾಯೋಜಕ ಅಡಿಡಸ್ ಅಂದು ಬಿಡುಗಡೆಗೊಳಿಸಿತ್ತು. ವೀಡಿಯೊವನ್ನು ಟೀಮ್ ಇಂಡಿಯಾವು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪ್ರಕಟಿಸಿತ್ತು.

ಟಿ20 ವಿಶ್ವಕಪ್ ನಲ್ಲಿ ಆಡುವ ತಂಡವನ್ನು ಭಾರತವು ಈಗಾಗಲೇ ಘೋಷಿಸಿದೆ.

ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಪಂದ್ಯಾವಳಿಯು ಜೂನ್ 1ರಂದು ಆರಂಭಗೊಳ್ಳುತ್ತದೆ.

ಭಾರತವು ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿರುವ ಇತರ ತಂಡಗಳೆಂದರೆ ಪಾಕಿಸ್ತಾನ, ಐರ್ಲ್ಯಾಂಡ್, ಕೆನಡ ಮತ್ತು ಸಹ ಆತಿಥೇಯ ಅಮೆರಿಕ.

ಭಾರತದ ಮೊದಲ ಪಂದ್ಯವು ಐರ್ಲ್ಯಾಂಡ್ ವಿರುದ್ಧ ನ್ಯೂಯಾರ್ಕ್ನ ನಸೌ ಕೌಂಟಿ ಇಂಟರ್ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ ನಲ್ಲಿ ಜೂನ್ 5ರಂದು ನಡೆಯಲಿದೆ. ಬಳಿಕ, ಜೂನ್ 9ರಂದು ಅದೇ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯ ನಡೆಯಲಿದೆ.

ಭಾರತೀಯ ತಂಡ: ರೋಹಿತ್ ಶರ್ಮ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಶಭ್ ಪಂತ್ (ವಿಕೆಟ್‌ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್‌ ಕೀಪರ್), ಶಿವಮ್ ದುಬೆ, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಝ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News