×
Ad

ಜಿತೇಶ್ ಶರ್ಮಾ ಕ್ರೀಸ್‌ ನಿಂದ ಹೊರಗಿದ್ದರೂ ರನೌಟ್ ಅಲ್ಲ, ಯಾಕೆ?

Update: 2025-05-28 22:25 IST

PC : NDTV 

ಲಕ್ನೋ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಮಂಗಳವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಲಕ್ನೊ ಸೂಪರ್ ಜಯಂಟ್ಸ್ (ಎಲ್‌ಎಸ್‌ಜಿ) ತಂಡವನ್ನು ಭರ್ಜರಿ ಆರು ವಿಕೆಟ್‌ ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ ಹಾಗೂ ಆ ಮೂಲಕ ಮೊದಲ ಕ್ವಾಲಿಫೈಯರ್‌ ನಲ್ಲಿ ಆಡುವ ಅರ್ಹತೆ ಪಡೆದುಕೊಂಡಿದೆ.

228 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟುವ ವೇಳೆ ಆರ್‌ಸಿಬಿ ನಾಯಕ ಜಿತೇಶ್ ಶರ್ಮಾರನ್ನು ನಾನ್-ಸ್ಟ್ರೈಕರ್ ಕೊನೆಯಲ್ಲಿ ರನೌಟ್ ಮಾಡುವ ವಿವಾದಾತ್ಮಕ ಪ್ರಯತ್ನವೊಂದನ್ನು ಲಕ್ನೋ ಬೌಲರ್ ದಿಗ್ವೇಶ್ ರಾಠಿ ಮಾಡಿದರು. ಆದರೆ, ರನೌಟ್ ಮನವಿಯನ್ನು ಲಕ್ನೋ ನಾಯಕ ರಿಷಭ್ ಪಂತ್ ಹಿಂದೆಗೆದುಕೊಂಡ ಬಳಿಕ, ಎಮ್‌ಸಿಸಿ ಕಾನೂನು 38.3ರ ಅಡಿಯಲ್ಲಿ ರನೌಟ್ ಮನವಿಯನ್ನು ತಳ್ಳಿಹಾಕಲಾಯಿತು.

17ನೇ ಓವರ್‌ ನ ಕೊನೆಯ ಎಸೆತವನ್ನು ಬೌಲ್ ಮಾಡುತ್ತಿದ್ದ ರಾಠಿ, ಬೌಲಿಂಗ್ ಮಾಡುತ್ತಿದ್ದಾಗಲೇ ಜಿತೇಶ್ ಶರ್ಮಾರನ್ನು ನಾನ್-ಸ್ಟ್ರೈಕರ್ ತುದಿಯಲ್ಲಿ ರನೌಟ್ ಮಾಡಿದರು. ಬೇಲ್‌ ಗಳನ್ನು ಹಾರಿಸಲು ರಾಠಿ ಪ್ರಯತ್ನಿಸಿದ ನಿರ್ದಿಷ್ಟ ಸಮಯವನ್ನು ತೃತೀಯ ಅಂಪೈರ್ ಗಣನೆಗೆ ತೆಗೆದುಕೊಂಡು ಅದು ಔಟ್ ಅಲ್ಲ ಎಂದು ಘೋಷಿಸಿದರು.

ರನೌಟ್ ಮಾಡುವ ಮುನ್ನ ರಾಠಿ ತನ್ನ ಬೌಲಿಂಗ್ ಕ್ರಿಯೆಯನ್ನು ಪೂರ್ಣಗೊಳಿಸಿರುವುದನ್ನು ಮತ್ತು ಕ್ರೀಸ್ ದಾಟಿರುವುದನ್ನು ರಿಪ್ಲೇಗಳು ತೋರಿಸಿವೆ. ಎಮ್‌ಸಿಸಿಯ 38.3.1 ನಿಯಮದ ಪ್ರಕಾರ ಇದು ರನೌಟ್ ಅಲ್ಲ.

ರಿಷಭ್ ಪಂತ್ ಆರ್‌ಸಿಬಿಯ ಉಸ್ತುವಾರಿ ನಾಯಕ ಶರ್ಮಾರನ್ನು ಆಲಿಂಗಿಸಿಕೊಳ್ಳುವುದನ್ನು ಟಿವಿಯಲ್ಲಿ ಬಳಿಕ ತೋರಿಸಲಾಗಿದೆ. ಆದಾಗ್ಯೂ, ರನೌಟ್ ಮನವಿಯನ್ನು ಪಂತ್ ಹಿಂದೆಗೆದುಕೊಳ್ಳದಿದ್ದರೂ ಅದು ರನೌಟ್ ಆಗಿರಲಿಲ್ಲ. ರಾಠಿ ಅವರು ಶರ್ಮಾರನ್ನು ರನೌಟ್ ಮಾಡುವಾಗ ತನ್ನ ಬೌಲಿಂಗ್ ಕ್ರಿಯೆಯನ್ನು ಪೂರ್ಣಗೊಳಿಸಿದ್ದರು. ಓರ್ವ ಬೌಲರ್ ಬೌಲಿಂಗ್ ಮಾಡುತ್ತಿರುವಾಗ ಗರಿಷ್ಠ ಎತ್ತರಕ್ಕೆ ಕೈಎತ್ತುವ ಮೊದಲೇ ನಾನ್-ಸ್ಟ್ರೈಕರ್ ತುದಿಯಲ್ಲಿ ರನೌಟ್ ಮಾಡಬೇಕು ಎಂದು ನಿಯಮಗಳು ಹೇಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News