×
Ad

ಬಾಂಗ್ಲಾವನ್ನು 4 ವಿಕೆಟ್‌ಗಳಿಂದ ಸೋಲಿಸಿದ ಕಿವೀಸ್ ; 2 ಪಂದ್ಯಗಳ ಟೆಸ್ಟ್ ಸರಣಿ 1-1ರಲ್ಲಿ ಸಮಬಲ

Update: 2023-12-09 21:52 IST

Photo : X

ಢಾಕಾ: ಟೆಸ್ಟ್ ಸರಣಿಯ ಎರಡನೇ ಹಾಗೂ ಕೊನೆಯ ಪಂದ್ಯದಲ್ಲಿ ಶನಿವಾರ ನ್ಯೂಝಿಲ್ಯಾಂಡ್ ಬಾಂಗ್ಲಾದೇಶವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿದೆ. ಇದರೊಂದಿಗೆ ಸರಣಿಯನ್ನು 1-1ರಿಂದ ಸಮಬಲಗೊಳಿಸುವಲ್ಲಿ ನ್ಯೂಝಿಲ್ಯಾಂಡ್ ಯಶಸ್ವಿಯಾಗಿದೆ.

ಢಾಕಾದ ಮೀರ್‌ಪುರದಲ್ಲಿರುವ ಶೇರ್ ಬಾಂಗ್ಲಾ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯವನ್ನು ಗೆಲ್ಲಲು ನಾಲ್ಕನೇ ದಿನವಾದ ಶನಿವಾರ ತನ್ನ ಎರಡನೇ ಇನಿಂಗ್ಸ್‌ನಲ್ಲಿ 137 ರನ್‌ಗಳನ್ನು ಗಳಿಸುವ ಗುರಿಯನ್ನು ನ್ಯೂಝಿಲ್ಯಾಂಡ್ ಪಡೆಯಿತು. ಗುರಿಯನ್ನು ಬೆನ್ನತ್ತಿದ ಕಿವೀಸ್ ಆಟಗಾರರು 39.4 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 139 ರನ್‌ಗಳನ್ನು ಗಳಿಸಿ ತಂಡವನ್ನು ವಿಜಯದ ತೀರ ತಲುಪಿಸಿದರು.

ಬಾಂಗ್ಲಾದೇಶದ ದ್ವಿತೀಯ ಇನಿಂಗ್ಸ್‌ನಲ್ಲಿ ಅಜಾಝ್ ಪಟೇಲ್ ಅತ್ಯುತ್ತಮ ಬೌಲಿಂಗ್ ಕೌಶಲ ಪ್ರದರ್ಶಿಸಿ ಆರು ವಿಕೆಟ್‌ಗಳನ್ನು ಉರುಳಿಸಿ ತನ್ನ ತಂಡದ ಗೆಲುವಿಗೆ ನಾಂದಿ ಹಾಡಿದರು. ಬಳಿಕ ನ್ಯೂಝಿಲ್ಯಾಂಡ್‌ನ ದ್ವಿತೀಯ ಇನಿಂಗ್ಸ್‌ನಲ್ಲಿ ಗ್ಲೆನ್ ಫಿಲಿಪ್ಸ್ (40 ಅಜೇಯ) ಮತ್ತು ಮಿಚೆಲ್ ಸ್ಯಾಂಟನರ್ (35 ಅಜೇಯ) ಮುರಿಯದ ಏಳನೇ ವಿಕೆಟ್‌ಗೆ 70 ರನ್‌ಗಳನ್ನು ಸೇರಿಸಿ ತಂಡದ ಗೆಲುವನ್ನು ಖಾತರಿಪಡಿಸಿದರು.

ಗ್ಲೆನ್ ಫಿಲಿಪ್ಸ್‌ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು. 15 ವಿಕೆಟ್‌ಗಳನ್ನು ಪಡೆದ ತೈಜುಲ್ ಇಸ್ಲಾಮ್‌ಗೆ ಸರಣಿಶ್ರೇಷ್ಠ ಪ್ರಶಸ್ತಿ ಒಲಿಯಿತು.

ಶನಿವಾರ ಬೆಳಗ್ಗೆ ಬಾಂಗ್ಲಾದೇಶವು 2 ವಿಕೆಟ್‌ಗಳ ನಷ್ಟಕ್ಕೆ 38ರಿಂದ ತನ್ನ ದ್ವಿತೀಯ ಇನಿಂಗ್ಸನ್ನು ಮುಂದುವರಿಸಿತು. ಪಟೇಲ್ (6-57) ಮತ್ತು ಸ್ಯಾಂಟನರ್ (3-51) ದಾಳಿಗೆ ಬಾಂಗ್ಲಾ ಬ್ಯಾಟರ್‌ಗಳು ತತ್ತರಿಸಿದರು. ಝಾಕಿರ್ ಹಸನ್ (59)ರ ಅರ್ಧ ಶತಕದ ನೆರವಿನಿಂದ ಆತಿಥೇಯರು ಭೋಜನ ವಿರಾಮಕ್ಕೆ ಮುನ್ನವೇ ತಮ್ಮ ದ್ವಿತೀಯ ಇನಿಂಗ್ಸನ್ನು 144ಕ್ಕೆ ಮುಕ್ತಾಯಗೊಳಿಸಿದರು.

ಹದಗೆಡುತ್ತಿರುವ ಪಿಚ್‌ನಲ್ಲಿ ಗೆಲುವಿಗೆ 137 ರನ್‌ಗಳನ್ನು ಗಳಿಸುವ ಸವಾಲಿನ ಗುರಿಯನ್ನು ಪಡೆದ ಕಿವೀಸ್ ಆಟಗಾರರು ಒಂದು ಹಂತದಲ್ಲಿ 69 ರನ್‌ಗಳನ್ನು ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿದ್ದರು. ಬಳಿಕ ಫಿಲಿಪ್ಸ್ ಮತ್ತು ಸ್ಯಾಂಟನರ್ ಅಮೋಘ ಜೊತೆಯಾಟ ನೀಡಿ ತಂಡವನ್ನು ಗೆಲುವಿನತ್ತ ಒಯ್ದರು.

̲̲̲

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News