ಮುಂಬೈ ಇಂಡಿಯನ್ಸ್ ತಂಡದ ಕೋಚ್ ಆಗಿ ಲಿಸಾ ಕೈಟ್ಲಿ ನೇಮಕ
ಮುಂಬೈ, ಸೆ.25: ಮುಂಬೈ ಇಂಡಿಯನ್ಸ್ ತಂಡವು ಆಸ್ಟ್ರೇಲಿಯದ ಮಾಜಿ ಕ್ರಿಕೆಟ್ ಆಟಗಾರ್ತಿ ಹಾಗೂ 2 ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ಲಿಸಾ ಕೈಟ್ಲಿ ಅವರನ್ನು ತನ್ನ ಮಹಿಳೆಯರ ತಂಡದ ಮುಖ್ಯ ಕೋಚ್ ಆಗಿ ನೇಮಿಸಿದೆ.
1997 ಹಾಗೂ 2005ರ ಆಸ್ಟ್ರೇಲಿಯದ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಕೈಟ್ಲಿಗೆ ಆಸ್ಟ್ರೇಲಿಯ, ಇಂಗ್ಲೆಂಡ್ ಹಾಗೂ ಪ್ರಮುಖ ಜಾಗತಿಕ ಲೀಗ್‌ಗಳಲ್ಲಿ ಕೋಚಿಂಗ್ ನೀಡಿರುವ ಅನುಭವ ಇದೆ.
ಮುಂಬೈ ಇಂಡಿಯನ್ಸ್ ತಂಡವು ಮಹಿಳೆಯರ ಪ್ರೀಮಿಯರ್ ಲೀಗ್‌ನಲ್ಲಿ 2023 ಹಾಗೂ 2025ರಲ್ಲಿ ಚಾಂಪಿಯನ್ಶಿಪ್ ಜಯಿಸಿ ಅತ್ಯಂತ ಯಶಸ್ವಿ ಫ್ರಾಂಚೈಸಿ ಎನಿಸಿಕೊಂಡಿದೆ.
ಇಂಗ್ಲೆಂಡ್ ತಂಡದ ಪೂರ್ಣಕಾಲಿಕ ಮುಖ್ಯ ಕೋಚ್ ಆಗಿ ನೇಮಕಗೊಂಡ ಮೊದಲ ಮಹಿಳೆ ಎನಿಸಿಕೊಂಡಿರುವ ಕೈಟ್ಲಿ ಅವರು ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ಮಹಿಳೆಯರ ತಂಡಗಳಿಗೆ ತರಬೇತಿ ನೀಡಿದ್ದರು.
ಆರಂಭಿಕ ಆಟಗಾರ್ತಿಯಾಗಿ ಆಸ್ಟ್ರೇಲಿಯ ತಂಡವನ್ನು 9 ಟೆಸ್ಟ್ ಪಂದ್ಯಗಳು, 82 ಏಕದಿನ ಅಂತರ್ರಾಷ್ಟ್ರೀಯ ಪಂದ್ಯಗಳು ಹಾಗೂ 1 ಟಿ-20 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು.