×
Ad

ಮಲೇಶ್ಯನ್ ಮಾಸ್ಟರ್ಸ್ 2025 | ಕಿಡಂಬಿ ಶ್ರೀಕಾಂತ್ ಪ್ರಧಾನ ಸುತ್ತಿಗೆ ತೇರ್ಗಡೆ

Update: 2025-05-20 21:03 IST

Srikanth Kidambi

ಕೌಲಾಲಂಪುರ : ಭಾರತದ ಕಿಡಂಬಿ ಶ್ರೀಕಾಂತ್ ಮಂಗಳವಾರ ಮಲೇಶ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪ್ರಧಾನ ಸುತ್ತಿಗೆ ತೇರ್ಗಡೆಗೊಂಡಿದ್ದಾರೆ. ಆದರೆ, ಉಳಿದ ಭಾರತೀಯ ಆಟಗಾರರಿಗೆ ಸಿಂಗಲ್ಸ್ ವಿಭಾಗದಲ್ಲಿ ಅರ್ಹತಾ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.

ಶ್ರೀಕಾಂತ್ ಪುರುಷರ ಸಿಂಗಲ್ಸ್‌ನ ಎರಡನೇ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮೊದಲ ಗೇಮನ್ನು ಕಳೆದುಕೊಂಡರೂ, ಬಳಿಕ ಆ ಹಿನ್ನಡೆಯಿಂದ ಚೇತರಿಸಿಕೊಂಡರು. ಅಂತಿಮವಾಗಿ ಅವರು ಚೈನೀಸ್ ತೈಪೆಯ ಹುವಾಂಗ್ ಯು ಕೈಯನ್ನು 9-21, 21-12, 21-6 ಗೇಮ್‌ಗಳಿಂದ ಪರಾಭವಗೊಳಿಸಿದರು.

ಇದಕ್ಕೂ ಮೊದಲು, 2021ರ ವಿಶ್ವ ಚಾಂಪಿಯನ್‌ಶಿಪ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿರುವ 32 ವರ್ಷದ ಶ್ರೀಕಾಂತ್ ತನ್ನ ಮೊದಲ ಸುತ್ತಿನ ಅರ್ಹತಾ ಪಂದ್ಯದಲ್ಲಿ ತೈಪೆಯ ಇನ್ನೋರ್ವ ಆಟಗಾರ ಕುವೊ ಕುವಾನ್ ಲಿನ್‌ರನ್ನು 21-8, 21-13 ಗೇಮ್‌ಗಳಿಂದ ಮಣಿಸಿದರು.

ಪಂದ್ಯಾವಳಿಯ ಪ್ರಧಾನ ಸುತ್ತಿನ ಆರಂಭಿಕ ಪಂದ್ಯದಲ್ಲಿ ಮಾಜಿ ವಿಶ್ವ ನಂಬರ್ ವನ್ ಆಟಗಾರ ಶ್ರೀಕಾಂತ್ ಚೀನಾದ ಆರನೇ ಶ್ರೇಯಾಂಕದ ಆಟಗಾರ ಲು ಗ್ವಾಂಝ್ ಝುರನ್ನು ಎದುರಿಸಲಿದ್ದಾರೆ.

ಇತರ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ, ಭಾರತದ ತರುಣ್ ಮನ್ನೆಪಲ್ಲಿ ಥಾಯ್ಲೆಂಡ್‌ನ ಪಣಿಟ್ಚಫೋನ್ ಟೀರರಟ್ಸಕುಲು ವಿರುದ್ಧ 13-21, 21-23 ಗೇಮ್‌ಗಳಿಂದ ಸೋತರೆ, ಎಸ್. ಶಂಕರ್ ಮುತ್ತುಸಾಮಿ ಸುಬ್ರಮಣಿಯನ್‌ರನ್ನು ಚೀನಾದ ಝು ಕ್ಸುವನ್ ಚೆನ್ 22-20, 22-20 ಗೇಮ್‌ಗಳಿಂದ ಮಣಿಸಿದರು. ಅವರಿಬ್ಬರೂ ಅರ್ಹತಾ ಹಂತದಲ್ಲೇ ಕೂಟದಿಂದ ಹೊರಬಿದ್ದರು.

ಮಹಿಳಾ ಸಿಂಗಲ್ಸ್ ಅರ್ಹತಾ ಸುತ್ತಿನಲ್ಲಿ, ಭಾರತದ ಅನ್ಮೋಲ್ ಖರ್ಬ್‌ರನ್ನು ತೈಪೆಯ ಹುಂಗ್ ಯಿ-ಟಿಂಗ್ 21-14, 21-18 ಗೇಮ್‌ಗಳಿಂದ ಹಿಮ್ಮೆಟ್ಟಿಸಿದರು.

ಮಿಶ್ರ ಡಬಲ್ಸ್‌ನಲ್ಲಿ, ಭಾರತದ ಮೋಹಿತ್ ಜಗ್ಲನ್ ಮತ್ತು ಲಕ್ಷಿತಾ ಜಗ್ಲನ್ ಜೋಡಿಯು ಮಲೇಶ್ಯದ ಮಿಂಗ್ ಯಾಪ್ ಟೂ ಮತ್ತು ಲೀ ಯು ಶಾನ್ ಜೋಡಿಯ ವಿರುದ್ಧ 15-21, 16-21 ಗೇಮ್‌ಗಳಿಂದ ಸೋಲನುಭವಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News