×
Ad

ಮಹಿಳಾ ವಿಶ್ವಕಪ್‌ನಲ್ಲಿ ಮಿಂಚಿದ ಮಂಗಳೂರು ಮೂಲದ ಜೆಮಿಮಾ ರೊಡ್ರಿಗಸ್

ಶತಕ ಸಿಡಿಸಿ ಭಾರತವನ್ನು ಫೈನಲ್ ಅಂಗಳಕ್ಕೆ ಕೊಂಡೊಯ್ದ ಬ್ಯಾಟರ್

Update: 2025-10-31 23:41 IST

ಮುಂಬೈ: ವಿಶ್ವಕಪ್ ಸೆಮಿಫೈನಲ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಬ್ಬರದ ಶತಕ ಬಾರಿಸಿ ಭಾರತವನ್ನು ಫೈನಲ್‌ ಅಂಗಳಕ್ಕೆ ತಲುಪಿಸಿದ ಜೆಮಿಮಾ ರೊಡ್ರಿಗಸ್ ಬಗ್ಗೆ ದೇಶದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ. ಮುಂಬೈನ ಭಂಡಪ್‌ನಲ್ಲಿ ಜನಿಸಿದ ಜೆಮಿಮಾ ಅವರು ಮಂಗಳೂರು ಮೂಲದವರು. ಜೆಮಿಮಾ ಅವರ ಅಜ್ಜಿ ಜೋಸೆಫಿನ್ ರೊಡ್ರಿಗಸ್ ಬಂಟ್ವಾಳ ತಾಲೂಕಿನ ಅಮ್ಮೆಂಬಳದವರು. ತಂದೆ ಐವನ್‌-ತಾಯಿ ಲವಿಟಾ ರೊಡ್ರಿಗಸ್‌ ಇಬ್ಬರೂ ಮಂಗಳೂರು ಕ್ರಿಶ್ಚಿಯನ್ ಕುಟುಂಬದಿಂದ ಬಂದವರು.

ಗುರುವಾರ ನವಿ ಮುಂಬೈಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಜೆಮಿಮಾ 134 ಎಸೆತಗಳಲ್ಲಿ ಅಜೇಯ 127 ರನ್ ಬಾರಿಸಿ ಭಾರತ ತಂಡವನ್ನು ವಿಜಯದ ದಡಕ್ಕೇರಿಸಿದರು. ಭಾರತವು 339 ರನ್‌ಗಳ ಭಾರೀ ಗುರಿಯನ್ನು ಬೆನ್ನಟ್ಟಿ ಐತಿಹಾಸಿಕ ಗೆಲುವು ಸಾಧಿಸಿತು. ಈ ಇನ್ನಿಂಗ್ಸ್ ಭಾರತದ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಅತಿದೊಡ್ಡ ಯಶಸ್ವಿ ಚೇಸ್‌ಗಳಲ್ಲಿ ಒಂದು ಎಂದು ದಾಖಲಾಗಿದೆ.

ಈ ಗೆಲುವಿನಿಂದ ಜೆಮಿಮಾ ಕೇವಲ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನಷ್ಟೇ ಅಲ್ಲ, ಕೋಟ್ಯಂತರ ಅಭಿಮಾನಿಗಳ ಹೃದಯವನ್ನೂ ಗೆದ್ದಿದ್ದಾರೆ. ಒಮ್ಮೆ ರೀಲ್‌ಗಳ ರಾಣಿ ಎಂದು ಟೀಕೆಗೆ ಗುರಿಯಾಗಿದ್ದ ಜೆಮಿಮಾ, ಈಗ ರನ್‌ಗಳ ರಾಣಿಯಾಗಿ ಪೂರ್ವಾಗ್ರಹಕ್ಕೆ ತಕ್ಕ ಉತ್ತರ ನೀಡಿದ್ದಾರೆ.

ಬಾಲ್ಯದಲ್ಲಿ ಹಾಕಿ ಮತ್ತು ಕ್ರಿಕೆಟ್ ಎರಡರಲ್ಲೂ ಜೆಮಿಮಾ ಆಸಕ್ತಿ ತೋರಿದ್ದರು. ಮುಂಬೈನ 17 ಹಾಗೂ 19 ವರ್ಷ ವಯೋಮಾನದ ಹಾಕಿ ತಂಡಗಳಲ್ಲಿ ಪ್ರತಿನಿಧಿಸಿದ್ದ ಜೆಮಿಮಾ, ಎರಡೂ ಕ್ರೀಡೆಗಳಲ್ಲಿ ಸ್ಪರ್ಧಾತ್ಮಕ ಮಟ್ಟದಲ್ಲಿ ಮೆರೆದ ಅಪರೂಪದ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರು ಎನ್ನುವುದೇ ವಿಶೇಷ.

ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಶತಕದ ಬಳಿಕ ಜೆಮಿಮಾ ಸಂಭ್ರಮಾಚರಣೆ ಮಾಡಿರಲಿಲ್ಲ. ಈ ಕುರಿತು ಕೇಳಿದಾಗ, 'ಇಂದು ನನ್ನ ಅರ್ಧಶತಕ ಅಥವಾ ಶತಕಕ್ಕೆ ಹೆಚ್ಚಿನ ಮಹತ್ವ ಇರಲಿಲ್ಲ. ಭಾರತಕ್ಕಾಗಿ ಪಂದ್ಯ ಗೆಲ್ಲಿಸುವುದು ನನ್ನ ಗುರಿಯಾಗಿತ್ತು' ಎಂದು ಹೇಳಿದ್ದಾರೆ. ಆ ಮೂಲಕ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ಜೆಮಿಮಾ, ತಮ್ಮ ವೃತ್ತಿ ಜೀವನದ ಶ್ರೇಷ್ಠ ಇನಿಂಗ್ಸ್ ಕಟ್ಟುವ ಮೂಲಕ ಭಾರತಕ್ಕೆ ಸ್ಮರಣೀಯ ಗೆಲುವು ಒದಗಿಸಿಕೊಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News