×
Ad

ಭಾರತ ವಿರುದ್ಧ ಫೈನಲ್ ಪಂದ್ಯಕ್ಕೆ ವೇಗದ ಬೌಲರ್ ಮ್ಯಾಟ್ ಹೆನ್ರಿ ಅನುಮಾನ?

Update: 2025-03-07 21:24 IST

 ಮ್ಯಾಟ್ ಹೆನ್ರಿ | NDTV 

ದುಬೈ: ಭಾರತ ತಂಡದ ವಿರುದ್ಧ ರವಿವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆಗೆ ವೇಗದ ಬೌಲರ್ ಮ್ಯಾಟ್ ಹೆನ್ರಿ ಭುಜನೋವಿನಿಂದ ಚೇತರಿಸಿಕೊಳ್ಳುವ ಬಗ್ಗೆ ನ್ಯೂಝಿಲ್ಯಾಂಡ್ ಸಂಪೂರ್ಣ ವಿಶ್ವಾಸದಲ್ಲಿದೆ ಎಂದು ಕೋಚ್ ಗ್ಯಾರಿ ಸ್ಟಿಡ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಲಾಹೋರ್‌ನಲ್ಲಿ ನಡೆದಿದ್ದ 2ನೇ ಸೆಮಿ ಫೈನಲ್‌ನಲ್ಲಿ ಕ್ಯಾಚ್ ಪಡೆಯುವ ಯತ್ನದಲ್ಲಿದ್ದಾಗ ಹೆನ್ರಿಯ ಬಲಭುಜಕ್ಕೆ ಗಾಯವಾಗಿದೆ. ಹೆನ್ರಿ ಪ್ರಶಸ್ತಿ ಸುತ್ತಿನ ಪಂದ್ಯಕ್ಕಿಂತ ಮೊದಲು ಚೇತರಿಸಿಕೊಳ್ಳುವ ಧಾವಂತದಲ್ಲಿದ್ದಾರೆ.

ಮ್ಯಾಟ್ ಹೆನ್ರಿ, ಕ್ಯಾಚ್ ಪಡೆಯುವಾಗ ಭುಜಕ್ಕೆ ಗಾಯವಾಗಿದೆ. ಆಗ ಅವರು ಅಸ್ವಸ್ಥರಾದರು. ಅವರು ಬೌಲಿಂಗ್ ಮಾಡಲು ಹಿಂತಿರುಗಲಿದ್ದಾರೆ ಎಂದು ಭಾವಿಸುತ್ತೇನೆ ಎನ್ನುವುದಾಗಿ ಸ್ಪಿಡ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿರುವ ನ್ಯೂಝಿಲ್ಯಾಂಡ್ ತಂಡಕ್ಕೆ ಹೆನ್ರಿ ಪ್ರಮುಖ ಅಸ್ತ್ರವಾಗಿದ್ದು, ಹೆನ್ರಿ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ 42 ರನ್‌ಗೆ 5 ವಿಕೆಟ್‌ಗಳನ್ನು ಪಡೆದಿದ್ದರು.

ಲಾಹೋರ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವು 363 ರನ್ ಚೇಸ್ ಮಾಡುವಾಗ ಹೆನ್ರಿಕ್ ಕ್ಲಾಸೆನ್ ನೀಡಿದ ಕ್ಯಾಚನ್ನು ಹೆನ್ರಿ ಪಡೆದಿದ್ದರು. ಆದರೆ ಕ್ಯಾಚ್ ಪಡೆಯುವ ಭರದಲ್ಲಿ ಅವರ ಭುಜಕ್ಕೆ ನೋವಾಗಿತ್ತು.

ಭುಜನೋವು ಕಾಣಿಸಿಕೊಂಡ ನಂತರ ಮೈದಾನವನ್ನು ತೊರೆದಿದ್ದ ಹೆನ್ರಿ ಆ ನಂತರ ತನ್ನ 7 ಓವರ್‌ಗಳ ಸ್ಪೆಲ್‌ನಲ್ಲಿ ಇನ್ನೆರಡು ಓವರ್ ಎಸೆಯಲು ಮೈದಾನಕ್ಕೆ ವಾಪಸಾದರು.

‘‘ನಾವು ಹೆನ್ರಿ ಅವರ ಕೆಲವು ಸ್ಕ್ಯಾನ್‌ಗಳನ್ನು ಮಾಡಿದ್ದೇವೆ. ಫೈನಲ್ ಪಂದ್ಯದಲ್ಲಿ ಆಡಲು ನಾವು ಅವರಿಗೆ ಎಲ್ಲ ಅವಕಾಶವನ್ನೂ ನೀಡಲಿದ್ದೇವೆ. ಈಗ ನಮಗೆ ಅವರ ಭುಜನೋವಿನ ಕುರಿತು ಸಂಪೂರ್ಣ ಮಾಹಿತಿ ಲಭಿಸಿಲ್ಲ. ಫೀಲ್ಡಿಂಗ್ ವೇಳೆ ಬಿದ್ದು ಅವರಿಗೆ ನೋವು ಕಾಣಿಸಿಕೊಂಡಿದೆ ಎಂಬುದು ಸ್ಪಷ್ಟ’’ ಎಂದು ಸ್ಟಿಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News