ಮ್ಯಾಕ್ಸ್ ವೆಲ್ ಆಟ ; ಆಸ್ಟ್ರೇಲಿಯಕ್ಕೆ ರೋಚಕ ಜಯ
Photo : Hindustantimes
ಗುವಾಹಟಿ : ಇಲ್ಲಿನ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಭಾರತದ ವಿರುದ್ಧ ರೋಚಕ ಜಯ ಸಾಧಿಸಿದೆ.
ಭಾರತ ನೀಡಿದ 223 ರನ್ ಗಳ ಗುರಿ ಬೆನ್ನುಹತ್ತಿದ ಆಸ್ಟ್ರೇಲಿಯ ಉತ್ತಮ ಆರಂಭ ಪಡೆಯಿತು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಟ್ರಾವೆಸ್ ಹೆಡ್ - ಆರೋನ್ ಹಾರ್ಡಿ ಜೋಡಿ ಭಾರತದ ಬೌಲರ್ಗಳ ಬೆವರಿಳಿಸಿದರು. 18 ಎಸೆತಗಳಲ್ಲಿ 8 ಬೌಂಡರಿಗಳೊಂದಿಗೆ 35 ರನ್ ಗಳಿಸಿದ ಟ್ರಾವೆಸ್ ಹೆಡ್ ವಿಶ್ವಕಪ್ ಫೈನಲ್ ನಲ್ಲಿ ಆಡಿದ ಆಟ ನೆನಪಿಸಿದರು. ಆಸ್ಟ್ರೇಲಿಯ ತಂಡ 47 ರನ್ ಗಳಿಸಿದ್ದಾಗ ಆರೋನ್ ಹಾರ್ಡಿ ಅರ್ಶದೀಪ್ ಸಿಂಗ್ ಬೌಲಿಂಗ್‌ನಲ್ಲಿ ಇಶಾನ್ ಕಿಶನ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ಜೋಸ್ ಇಂಗ್ಲಿಸ್ 10 ರನ್ ಗಳಿಸಿ ರವಿ ಬಿಷ್ಣೋಯಿಗೆ ವಿಕೆಟ್ ಒಪ್ಪಿಸಿದರು.
ಟ್ರಾವೆಸ್ ಹೆಡ್ ಹಾಗೂ ಜೋಸ್ ಇಂಗ್ಲಿಸ್ ವಿಕೆಟ್ ಕಬಳಿಸಿದ ಭಾರತ ತಂದ ಆತ್ಮವಿಶ್ವಾಸದಲ್ಲಿ ತೇಲಿತು. ಬಳಿಕ ಕ್ರೀಸ್ ಗೆ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತ ತಂಡಕ್ಕೆ ಒತ್ತಡ ಹಾಕುವಲ್ಲಿ ಯಶಸ್ವಿಯಾದರು. 48 ಎಸೆತ ಎದುರಿಸಿದ ಮ್ಯಾಕ್ಸ್‌ವೆಲ್ 8 ಬೌಂಡರಿ 8 ಸಿಕ್ಸರ್ ಗಳೊಂದಿಗೆ 104 ರನ್ ಗಳಿಸಿ ಅಜೇಯರಾಗಿ ಉಳಿದು ಆಸ್ಟ್ರೇಲಿಯ ತಂಡವನ್ನು ಗೆಲುವಿನ ದಡ ಸೇರಿಸಿದರು.
ಮಾರ್ಕಸ್ ಸ್ಟೊಯಿನಿಸ್ 17, ಮಾಥ್ಯೂ ವೇಡ್ 28 ರನ್ ಗಳಿಸಿದರು. ಟಿಮ್ ಡೇವಿಡ್ ಶೂನ್ಯಕ್ಕೆ ಔಟ್ ಆದರು.
ಭಾರತ ತಂಡದ 4 ಓವರ್‌ಗಳಲ್ಲಿ 68 ರನ್ ನೀಡಿದ ಪ್ರಸಿದ್ಧ ಕೃಷ್ಣ ದುಬಾರಿ ಬೌಲರ್ ಎನಿಸಿದರು. ರವಿ ಬಿಷ್ಣೋಯಿ 2 ವಿಕೆಟ್ ಪಡೆದರು. ಅವೇಶ್ ಖಾನ್, ಅಕ್ಸರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.