ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಮೆಗ್ ಲ್ಯಾನಿಂಗ್ ವಿದಾಯ
Photo : x/@icc
ಮೆಲ್ಬೋರ್ನ್: ಆಸ್ಟ್ರೇಲಿಯಾ ಮಹಿಳಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅವರು ಗುರುವಾರ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ ಎಂದು indiatoday.in ವರದಿ ಮಾಡಿದೆ. ಎರಡು ಬಾರಿಯ ಏಕದಿನ ವಿಶ್ವಕಪ್ ವಿಜೇತೆ ಮತ್ತು ಐದು ಬಾರಿಯ ಟಿ20 ವಿಶ್ವಕಪ್ ವಿಜೇತೆ ಲ್ಯಾನಿಂಗ್, ಆಸೀಸ್ ಪರ ಎಂಟು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
“ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರ ಉಳಿಯುವ ಈ ನಿರ್ಧಾರ ಕೈಗೊಳ್ಳಲು ಕಷ್ಟವಾಗಿತ್ತು. ಆದರೆ ಇದು ಸರಿಯಾದ ಸಮಯ ಎಂದು ನನಗನಿಸುತ್ತಿದೆ” ಎಂದು ಲ್ಯಾನಿಂಗ್ ಭಾವುಕರಾಗಿ ನುಡಿದಿದ್ದಾರೆ.
“ನಾನು ಅದೃಷ್ಟವಂತೆ. 13 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ನಾನು ಆನಂದಿಸಿದ್ದೇನೆ. ಹೊಸದರ ಕಡೆಗೆ ಮುಖಮಾಡಲುಇದು ಸರಿಯಾದ ಸಮಯ ಎಂದು ಭಾವಿಸಿದ್ದೇನೆ. ನನ್ನ ಕ್ರಿಕೆಟ್ ಪಯಣದುದ್ದಕ್ಕೂ ಸಹ ಆಟಗಾರ್ತಿಯರೊಂದಿಗೆ ಹಂಚಿಕೊಂಡ ಕ್ಷಣಗಳನ್ನು ಯಾವತ್ತೂ ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ.
ನಾಯಕಿಯಾಗಿ ಐದು ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಲ್ಯಾನಿಂಗ್, ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 17 ಶತಕ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನ 15 ಶತಕಗಳು ಅದರಲ್ಲಿ ಸೇರಿದೆ. 103 ಏಕದಿನ ಪಂದ್ಯಗಳಲ್ಲಿ 4602 ರನ್, 132 ಟಿ20 ಪಂದ್ಯಗಳಿಂದ 3405 ರನ್ ಗಳಿಸಿದ್ದಾರೆ.