ನನ್ನ ಸಂತೋಷವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ; ತೆಂಡುಲ್ಕರ್ ಶ್ಲಾಘನೆಗೆ ಜಮ್ಮು ಪ್ಯಾರಾ ಕ್ರಿಕೆಟಿಗ ಆಮಿರ್ ಹುಸೇನ್ ಪ್ರತಿಕ್ರಿಯೆ
ಆಮಿರ್ ಹುಸೇನ್ | Photo: ANI
ಹೊಸದಿಲ್ಲಿ: ತನ್ನನ್ನು ಶ್ಲಾಘಿಸಿರುವ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಗೆ ಕೃತಜ್ಞತೆ ಸಲ್ಲಿಸಿರುವ ಜಮ್ಮು-ಕಾಶ್ಮೀರದ 34ರ ವಯಸ್ಸಿನ ವಿಕಲಚೇತನ ಕ್ರಿಕೆಟಿಗ ಆಮಿರ್ ಹುಸೇನ್ ಲೋನ್, ಬ್ಯಾಟಿಂಗ್ ಮಾಂತ್ರಿಕನನ್ನು ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು.
ಆಮಿರ್ ಹುಸೇನ್ ಅಭಿಮಾನಿಯಾಗಿರುವ ತೆಂಡುಲ್ಕರ್, ಸ್ಫೂರ್ತಿದಾಯಕ ಕ್ರಿಕೆಟಿನನ್ನು ಭೇಟಿಯಾಗಿ, ಅವರಿಂದ ಜೆರ್ಸಿ ಪಡೆಯುವ ಇರಾದೆ ಇದೆ ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಪ್ಯಾರಾ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಆಮಿರ್, ವಿಶಿಷ್ಟವಾದ ಆಟದ ಶೈಲಿಯ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಶಿಕ್ಷಕರೊಬ್ಬರು ಆಮಿರ್ ಪ್ರತಿಭೆಯನ್ನು ಗುರುತಿಸಿ ಪ್ಯಾರಾ ಕ್ರಿಕೆಟಿಗೆ ಪರಿಚಯಿಸಿದ್ದು, 2013ರಲ್ಲಿ ಆಮಿರ್ ವೃತ್ತಿಪರ ಕ್ರಿಕೆಟ್ ಪಯಣವನ್ನು ಆರಂಭಿಸಿದ್ದಾರೆ.
ತನ್ನ ತಂದೆಯ ಮಿಲ್ ನಲ್ಲಿ ನಡೆದ ದುರಂತದಲ್ಲಿ ತನ್ನ 8ನೇ ವಯಸ್ಸಿನಲ್ಲಿ ಎರಡೂಕೈಗಳನ್ನು ಕಳೆದುಕೊಂಡಿದ್ದ ಆಮಿರ್ ಅಂಗವೈಕಲ್ಯವನ್ನು ಮೆಟ್ಟಿ ನಿಂತು ತನ್ನ ಕಾಲುಗಳಲ್ಲಿ ಬೌಲಿಂಗ್ ಮಾಡುತ್ತಾರೆ ಹಾಗೂ ತನ್ನ ಭುಜ ಹಾಗೂ ಕುತ್ತಿಗೆಯ ನೆರವಿನಿಂದ ಬ್ಯಾಟಿಂಗ್ ಮಾಡಬಲ್ಲರು.
ಸಚಿನ್ ಟ್ವೀಟ್ ನಂತರ ಎಎನ್ಐ ಜೊತೆ ಮಾತನಾಡಿದ ಆಮಿರ್, ಸಚಿನ್ ನನ್ನ ಜೀವನದ ಕಥೆಯನ್ನು ಹಂಚಿಕೊಂಡಿದ್ದಕ್ಕಾಗಿ ಹಾಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕಾಗಿ ನನಗೆ ನಿಜವಾಗಿಯೂ ಸಂತೋಷವಾಗಿದೆ. ನಾನು ಶೀಘ್ರದಲ್ಲೇ ಅವರನ್ನು ಭೇಟಿಯಾಗಲು ಬಯಸುತ್ತೇನೆ. ನನಗೆ ಬಾಲ್ಯದಿಂದಲೂ ಸಚಿನ್ ಎಂದರೆ ತುಂಬಾ ಇಷ್ಟ. ಅವರು ನನಗೆ ಈಗಲೂ ಸ್ಪೂರ್ತಿಯಾಗಿದ್ದಾರೆ. ಇದು ಜಮ್ಮು-ಕಾಶ್ಮೀರ ಹಾಗೂ ನನ್ನ ಜಿಲ್ಲೆ ಅನಂತನಾಗ್ ಗೆ ಹೆಮ್ಮೆಯ ವಿಚಾರ. ನನ್ನ ಸಂತೋಷವನ್ನು ನನ್ನ ಮಾತಿನಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ. ನಾನು ಹೀಗಾಗುತ್ತದೆ ಎಂದು ಯೋಚಿಸಿಯೇ ಇರಲಿಲ್ಲ ಎಂದರು.
ಆಮಿರ್ ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ವೀಡಿಯೊ ನೋಡಿ ನನ್ನ ಹೃದಯ ಮಿಡಿದಿದೆ. ಕ್ರಿಕೆಟ್ ಬಗ್ಗೆ ಅವರು ಎಷ್ಟು ಪ್ರೀತಿ ಹಾಗೂ ಸಮರ್ಪಣಾಭಾವ ಹೊಂದಿದ್ದಾರೆ ಎಂದು ಇದು ತೋರಿಸುತ್ತದೆ. ನಾನು ಒಂದು ದಿನ ಅವರನ್ನು ಭೇಟಿಯಾಗುತ್ತೇನೆ. ಅವರ ಹೆಸರಿನ ಜೆರ್ಸಿಯನ್ನು ಪಡೆಯುವ ವಿಶ್ವಾಸವಿದೆ. ಕ್ರೀಡೆಯನ್ನು ಆಡಲು ಉತ್ಸುಕರಾಗಿರುವ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದಕ್ಕೆ ಆಮಿರ್ ಗೆ ಧನ್ಯವಾದಗಳು ಎಂದು ಸಚಿನ್ ತೆಂಡುಲ್ಕರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.