ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಅಗ್ರ ಸ್ಥಾನ ನನ್ನ ಅಂತಿಮ ಗುರಿ: ನೀರಜ್ ಚೋಪ್ರಾ
ನೀರಜ್ ಚೋಪ್ರಾ | PC : olympics.com
ಒಸ್ಟ್ರಾವಾ(ಝೆಕ್ ಗಣರಾಜ್ಯ): ನಿರಂತರವಾಗಿ 90 ಮೀ.ದೂರ ಜಾವೆಲಿನ್ ಎಸೆದು ಸ್ವತಃ ಒತ್ತಡಕ್ಕೆ ಒಳಗಾಗಲು ಇಷ್ಟಪಡದ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಅಗ್ರ ಸ್ಥಾನ ಪಡೆಯುವುದು ಈ ವರ್ಷದ ತನ್ನ ಅಂತಿಮ ಗುರಿಯಾಗಿದೆ ಎಂದಿದ್ದಾರೆ.
ಝೆಕ್ ಗಣರಾಜ್ಯದ ಒಸ್ಟ್ರಾವಾದಲ್ಲಿ ಮಂಗಳವಾರ ಆರಂಭವಾಗಲಿರುವ ಗೋಲ್ಡನ್ ಸ್ಪೈಕ್ ಅತ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದೇನೆ ಎಂದು ಚೋಪ್ರಾ ಹೇಳಿದ್ದಾರೆ.
ಕಳೆದ ವಾರ ನಡೆದ ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ 88.16 ಮೀ.ದೂರಕ್ಕೆ ಜಾವೆಲಿನ್ ಎಸೆದಿರುವ ನೀರಜ್ ಅವರು ಜುಲಿಯನ್ ವೆಬೆರ್ರನ್ನು ಸೋಲಿಸಿ ಪ್ರಶಸ್ತಿಯನ್ನು ಜಯಿಸಿದ್ದರು. ಝೆಕ್ ದಿಗ್ಗಜ ಹಾಗೂ ತನ್ನ ಕೋಚ್ ಜಾನ್ ಝೆಲೆಝ್ನಿ ಮಾರ್ಗದರ್ಶನದಲ್ಲಿ ಶ್ರೇಷ್ಠ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಹೇಳಿದ್ದಾರೆ.
27ರ ಹರೆಯದ ಚೋಪ್ರಾ ಅವರು ದೋಹಾದಲ್ಲಿ ನಡೆದ ವರ್ಷದ ಮೊದಲ ಡೈಮಂಡ್ ಲೀಗ್ ಕ್ರೀಡಾಕೂಟದಲ್ಲಿ ಮೊದಲ ಬಾರಿ 90 ಮೀ.ಗೂ ಅಧಿಕ ದೂರ ಜಾವೆಲಿನ್ ಎಸೆದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ.
‘‘ಇಂತಹ ಮಹಾನ್ ಕ್ರೀಡಾಪಟು ಹಾಗೂ ತರಬೇತುದಾರರೊಂದಿಗೆ ಕೆಲಸ ಮಾಡಲು ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ತಂತ್ರಗಾರಿಕೆಯಲ್ಲ್ ಸ್ವಲ್ಪ ಸುಧಾರಣೆಯ ನಂತರ ನಾನು ಈ ವರ್ಷ 90 ಮೀ. ದೂರ ಜಾವೆಲಿನ್ ಎಸೆದಿದ್ದೇನೆ. ಇತ್ತೀಚೆಗೆ ನಿಂಬರ್ಕ್ನಲ್ಲಿ(ಝೆಕ್ ಗಣರಾಜ್ಯ)ಉತ್ತಮ ತರಬೇತಿ ಪಡೆದಿದ್ದೇನೆ. ಇಲ್ಲಿ ಒಸ್ಟ್ರಾವಾದಲ್ಲಿ ನನ್ನ ಅತ್ಯುತ್ತಮ ಪ್ರಯತ್ನ ಮಾಡುವೆ. ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ಶಿಪ್ ಗೆಲ್ಲುವುದು ಈ ವರ್ಷ ನನ್ನ ಮುಖ್ಯ ಗುರಿಯಾಗಿದೆ’’ ಎಂದು ಹಿಂದಿನ ಆವೃತ್ತಿಯ ಚಾಂಪಿಯನ್ಶಿಪ್ ನಲ್ಲಿ ಚಿನ್ನ ಗೆದ್ದಿದ್ದ ನೀರಜ್ ಹೇಳಿದ್ದಾರೆ.
‘‘ ಝೆಕ್ ಗಣರಾಜ್ಯದಲ್ಲಿ ಮಂಗಳವಾರ ನಡೆಯಲಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಇಲ್ಲಿ ‘ಓಟದ ರಾಜ’ ಉಸೇನ್ ಬೋಲ್ಟ್ ಸ್ಪರ್ಧಿಸಿದ್ದನ್ನು ಚಿಕ್ಕವನಿದ್ದಾಗ ಹಲವಾರು ಫೋಟೊಗಳು ಹಾಗೂ ವೀಡಿಯೊಗಳಲ್ಲಿ ನೋಡಿದ್ದೇನೆ. ನಾನಿಲ್ಲಿಗೆ ಕಳೆದ ವರ್ಷ ಬಂದಿದ್ದೆ. ಆದರೆ ಗಾಯದ ಕಾರಣಕ್ಕೆ ಸ್ಪರ್ಧಿಸಿರಲಿಲ್ಲ. 90 ಮೀ.ದೂರಕ್ಕೆ ಜಾವೆಲಿನ್ ಎಸೆಯುವುದಕ್ಕೆ ಮುಂದಾಗಿ ಅನಗತ್ಯ ಒತ್ತಡಕ್ಕೆ ಒಳಗಾಗಲು ಇಷ್ಟಪಡಲಾರೆ. ನಾನು ನಿಜವಾಗಿಯೂ ಕಠಿಣ ಶ್ರಮಪಡುವೆ’’ ಎಂದು ನೀರಜ್ ಹೇಳಿದ್ದಾರೆ.
ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ಟೋಕಿಯೊದಲ್ಲಿ ಈ ವರ್ಷದ ಸೆಪ್ಟಂಬರ್ 13ರಿಂದ 21ರ ತನಕ ನಡೆಯಲಿದೆ. ನೀರಜ್ 2020ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಹಾಗೂ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಜಯಿಸಿದ್ದರು.