ಟೋಕಿಯೊ ವರ್ಲ್ಡ್ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ | ಭಾರತ ತಂಡ ಪ್ರಕಟ, ನೀರಜ್ ಚೋಪ್ರಾ ನಾಯಕ
ನೀರಜ್ ಚೋಪ್ರಾ | PC: PTI
ಹೊಸದಿಲ್ಲಿ, ಆ.31: ಟೋಕಿಯೊದಲ್ಲಿ ಮುಂದಿನ ತಿಂಗಳು ಆರಂಭವಾಗಲಿರುವ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ಗಾಗಿ ಭಾರತದ ಅತ್ಲೆಟಿಕ್ಸ್ ಒಕ್ಕೂಟ(ಎಎಫ್‌ಐ)ರವಿವಾರ ತನ್ನ ಅಂತಿಮ ತಂಡವನ್ನು ಪ್ರಕಟಿಸಿದೆ.
ಭಾರತದ 19 ಸದಸ್ಯರ ತಂಡದಲ್ಲಿ 14 ಪುರುಷರು ಹಾಗೂ ಐದು ಮಹಿಳಾ ಅತ್ಲೀಟ್‌ಗಳಿದ್ದಾರೆ. ಇವರೆಲ್ಲರೂ 15 ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಹಾಲಿ ವಿಶ್ವ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ಅವರು ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಪದಕ ಗೆಲ್ಲಬಲ್ಲ ನೆಚ್ಚಿನ ಕ್ರೀಡಾಪಟುವಾಗಿದ್ದಾರೆ. ಸ್ಪರ್ಧೆಯಲ್ಲಿ ಇನ್ನೂ ಮೂವರು ಜಾವೆಲಿನ್ ಎಸೆತಗಾರರಾದ-ಸಚಿನ್ ಯಾದವ್, ಯಶ್ ವೀರ್ ಸಿಂಗ್ ಹಾಗೂ ರೋಹಿತ್ ಯಾದವ್ ಭಾಗವಹಿಸಲಿದ್ದಾರೆ.
ಹಾಲಿ ಚಾಂಪಿಯನ್ ಆಗಿರುವ ಹಿನ್ನೆಲೆಯಲ್ಲಿ ನೀರಜ್ ಚೋಪ್ರಾ ಅವರು ವಿಶ್ವ ಚಾಂಪಿಯನ್ ಶಿಪ್ ಗೆ ವೈಲ್ಡ್ ಕಾರ್ಡ್ ಮೂಲಕ ನೇರ ಪ್ರವೇಶ ಪಡೆದಿದ್ದಾರೆ.
ಭಾರತದ ಮೂವರು ಅತ್ಲೀಟ್‌ಗಳಾದ-ಗುಲ್ವೀರ್ ಸಿಂಗ್(5,000 ಮೀ.), ಪ್ರವೀಣ್ ಚಿತ್ರವೇಲ್(ಟ್ರಿಪಲ್ ಜಂಪ್) ಹಾಗೂ ಪಾರುಲ್ ಚೌಧರಿ(3,000 ಮೀ. ಸ್ಟೀಪಲ್ ಚೇಸ್)ಕೂಡ ವಿಶ್ವ ಚಾಂಪಿಯನ್ ಶಿಪ್ ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಗುಲ್ವೀರ್ ಅವರು 10,000 ಮೀ.ಓಟದಲ್ಲೂ ಭಾಗವಹಿಸಲಿದ್ದಾರೆ. ಮಧ್ಯಮ ಅಂತರದ ಓಟಗಾರ್ತಿ ಪೂಜಾ ಎರಡೂ ಸ್ಪರ್ಧೆಗಳಲ್ಲಿ(800 ಮೀ. ಹಾಗೂ 1500 ಮೀ.)ಭಾಗವಹಿಸುತ್ತಿರುವ ಭಾರತದ ಇನ್ನೋರ್ವ ಅತ್ಲೀಟ್ ಆಗಿದ್ದಾರೆ.
ಅವಿನಾಶ್ ಸಾಬ್ಳೆ, ನಂದಿನಿ ಅಗಸರ ಹಾಗೂ ಆಕಾಶ್‌ದೀಪ್ ಸಿಂಗ್ ಕೂಡ ಅರ್ಹತೆ ಪಡೆದಿದ್ದಾರೆ. ಆದರೆ ಈ ಮೂವರು ವೈದ್ಯಕೀಯವಾಗಿ ಅನ್ ಫಿಟ್ ಆಗಿರುವ ಕಾರಣ ಅಂತಿಮ ತಂಡಕ್ಕೆ ಆಯ್ಕೆಯಾಗಿಲ್ಲ.
‘‘ನಾವು ಸೆಪ್ಟಂಬರ್ 4ರಿಂದ 9ರ ತನಕ ಟೋಕಿಯೊದಲ್ಲಿ ಸ್ಪರ್ಧಾವಳಿಯ ಪೂರ್ವ ತರಬೇತಿ ಶಿಬಿರವನ್ನು ಆಯೋಜಿಸಲಿದ್ದೇವೆ. 10ನೇ ತಾರೀಖಿನಂದು ವಿಶ್ವ ಚಾಂಪಿಯನ್ ಶಿಪ್ ಗಾಗಿ ಅಧಿಕೃತ ಹೋಟೆಲ್ ಗೆ ತೆರಳಲಿದ್ದೇವೆ. ಅಲ್ಲಿ ಎಲ್ಲ ಅತ್ಲೀಟ್‌ಗಳು ತಂಗಲಿದ್ದಾರೆ. ಕೋಚ್ ಸ್ಕಾಟ್ ಸಿಮನ್ಸ್ ಹಾಗೂ ಗುಲ್ವೀರ್ ಸಿಂಗ್ ಸೆ.4ರಂದು ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. ಝೆಕಿಯಾದಿಂದ ಆಗಮಿಸಲಿರುವ ನೀರಜ್ ಚೋಪ್ರಾ ಸೆ.5ರಂದು ಟೋಕಿಯೊದಲ್ಲಿ ಶಿಬಿರವನ್ನು ಸೇರಲಿದ್ದಾರೆ’’ ಎಂದು ಎಎಫ್‌ಐ ಮುಖ್ಯ ಕೋಚ್ ರಾಧಾಕೃಷ್ಣನ್ ಹೇಳಿದ್ದಾರೆ.
ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ಸೆಪ್ಟಂಬರ್ 13ರಿಂದ 21ರ ತನಕ ನಡೆಯಲಿದೆ.
► ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ಗೆ ಭಾರತೀಯ ತಂಡ
1.ನೀರಜ್ ಚೋಪ್ರಾ-ಜಾವೆಲಿನ್(ವೈಲ್ಡ್ ಕಾರ್ಡ್ ಪ್ರವೇಶ)
2.ಗುಲ್ವೀರ್ ಸಿಂಗ್-5000 ಮೀ.
3.ಪ್ರವೀಣ್ ಚಿತ್ರವೇಲ್-ಟ್ರಿಪಲ್ ಜಂಪ್
4. ಅಬ್ದುಲ್ಲಾ ಅಬೂಬಕರ್-ಟ್ರಿಪಲ್ ಜಂಪ್
5. ಸರ್ವೇಶ್ ಕುಶಾರೆ- ಹೈಜಂಪ್
6.ಅನಿಮೇಶ್ ಕುಜುರ್-200 ಮೀ. ಓಟ
7. ಸಚಿನ್ ಯಾದವ್-ಜಾವೆಲಿನ್
8.ಯಶ್ ವೀರ್ ಸಿಂಗ್-ಜಾವೆಲಿನ್
9.ಮುರಳಿ ಶ್ರೀಶಂಕರ್-ಲಾಂಗ್ ಜಂಪ್
10.ಸೆರಿನ್ ಸೆಬಾಸ್ಟಿಯನ್-20 ಕಿ.ಮೀ. ರೇಸ್ ವಾಕ್
11. ರಾಮ್ ಬಾಬೂ-35 ಕಿ.ಮೀ. ರೇಸ್‌ವಾಕ್
12.ಗುಲ್ವೀರ್ ಸಿಂಗ್-10,000 ಮೀ. ಓಟ
13. ಸಂದೀಪ್-35 ಕಿ.ಮೀ. ರೇಸ್‌ವಾಕ್
14. ರೋಹಿತ್ ಯಾದವ್-ಜಾವೆಲಿನ್
15. ತೇಜಸ್ ಶಿರ್ಸೆ-110 ಮೀ. ಹರ್ಡಲ್ಸ್
ಮಹಿಳೆಯರು
1.ಪಾರುಲ್ ಚೌಧರಿ-3,000 ಮೀ. ಸ್ಟೀಪಲ್‌ಚೇಸ್
2. ಅನ್ನು ರಾಣಿ-ಜಾವೆಲಿನ್
3. ಪ್ರಿಯಾಂಕಾ ಗೋಸ್ವಾಮಿ-35 ಕಿ.ಮೀ. ರೇಸ್‌ವಾಕ್
4. ಅಂಕಿತಾ-3,000 ಮೀ. ಸ್ಟೀಪಲ್ ಚೇಸ್
5. ಪೂಜಾ-1500 ಮೀ. ಓಟ
6. ಪೂಜಾ-800 ಮೀ. ಓಟ