×
Ad

ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ | ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ಸ್ಪರ್ಧೆ

Update: 2025-09-16 21:52 IST

ನೀರಜ್ ಚೋಪ್ರಾ | PC : PTI

ಟೋಕಿಯೊ, ಸೆ.16: ಭಾರತದ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ಬುಧವಾರ ಅರ್ಹತಾ ಸುತ್ತಿನಲ್ಲಿ ಆಡುವ ಮೂಲಕ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿ ತನ್ನ ಅಭಿಯಾನ ಆರಂಭಿಸಲಿದ್ದಾರೆ.

ಚೋಪ್ರಾ ಅವರು ಪಾಕಿಸ್ತಾನದ ಒಲಿಂಪಿಕ್ಸ್ ಚಾಂಪಿಯನ್ ಅರ್ಷದ್ ನದೀಂ ಹಾಗೂ ಜರ್ಮನಿಯ ಡೈಮಂಡ್ ಲೀಗ್ ಚಾಂಪಿಯನ್ ಜುಲಿಯನ್ ವೆಬೆರ್ ಅವರಿಂದ ಕಠಿಣ ಸ್ಪರ್ಧೆ ಎದುರಿಸುವ ಸಾಧ್ಯತೆ ಇದೆ.

ಚೋಪ್ರಾ ಅವರು ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡ ಮೂರನೇ ಪುರುಷರ ಜಾವೆಲಿನ್ ಎಸೆತಗಾರ ಎನಿಸಿಕೊಳ್ಳುವ ಮೂಲಕ ಎಲೈಟ್ ಗುಂಪಿಗೆ ಸೇರುವ ಗುರಿ ಇಟ್ಟುಕೊಂಡಿದ್ದಾರೆ. ಝೆಕ್ ಲೆಜೆಂಡ್ ಜಾನ್ ಝೆಲೆಝ್ನಿ ಹಾಗೂ ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್ ಮಾತ್ರ ಸತತ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗೆದ್ದಿದ್ದರು.

2024ರ ಪ್ಯಾರಿಸ್ ಒಲಿಂಪಿಕ್ಸ್ ನಂತರ ಚೋಪ್ರಾ ಹಾಗೂ ನದೀಂ ಈ ಸ್ಪರ್ಧಾವಳಿಯಲ್ಲಿ ಮೊದಲ ಬಾರಿ ಮುಖಾಮುಖಿಯಾಗಲಿದ್ದಾರೆ.ಒಲಿಂಪಿಕ್ಸ್‌ ನಲ್ಲಿ 92.97 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದ ನದೀಂ ಚಿನ್ನದ ಪದಕ ಜಯಿಸಿದ್ದರೆ, ನೀರಜ್ ಚೋಪ್ರಾ( 89.45 ಮೀ.)ಬೆಳ್ಳಿ ಪದಕ ಜಯಿಸಿದ್ದಾರೆ.

ಬುಧವಾರ ನಡೆಯಲಿರುವ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಬಹು ನಿರೀಕ್ಷಿತ ಚೋಪ್ರಾ-ನದೀಂ ನಡುವಿನ ಹಣಾಹಣಿ ನಡೆಯುವುದಿಲ್ಲ. ಈ ಇಬ್ಬರು ಬೇರೆ ಬೇರೆ ಗುಂಪಿನಲ್ಲಿದ್ದಾರೆ. ಈ ಇಬ್ಬರು ಗುರುವಾರ ನಡೆಯಲಿರುವ ಫೈನಲ್ ಸುತ್ತಿನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ.

ಸ್ಪರ್ಧಾವಳಿಯಲ್ಲಿ ವೆಬೆರ್, ಪೀಟರ್ಸ್, ಕೀನ್ಯದ ಜುಲಿಯಸ್ ಯೆಗೊ, ಟ್ರಿನಿಡಾಡ್ ಆ್ಯಂಡ್ ಟೊಬಾಗೊದ ಕೆಶ್ರೊನ್ ವಾಲ್ಕಟ್, ಝೆಕ್‌ನ ಜೇಕಬ್ ವೆಡ್ಲೆಚ್ ಹಾಗೂ ಬ್ರೆಝಿಲ್‌ನ ಲೂಯಿಝ್ ಡಾ ಸಿಲ್ವಾ ಭಾಗವಹಿಸಲಿದ್ದಾರೆ.

ಈ ಬಾರಿಯ ಸ್ಪರ್ಧಾವಳಿಯಲ್ಲಿ ಭಾರತದ ನಾಲ್ವರು ಜಾವೆಲಿನ್ ಎಸೆತಗಾರರು ಭಾಗವಹಿಸುವ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ. ನೀರಜ್ ಚೋಪ್ರಾ, ಸಚಿನ್ ಯಾದವ್, ಯಶ್ವೀರ್ ಸಿಂಗ್ ಹಾಗೂ ರೋಹಿತ್ ಯಾದವ್ ಕಣಕ್ಕಿಳಿಯಲಿದ್ದಾರೆ. ಈ ಸ್ಪರ್ಧೆಯಲ್ಲಿ ಭಾರತವು ಗರಿಷ್ಠ ಸಂಖ್ಯೆಯ ಸ್ಪರ್ಧಿಗಳನ್ನು ಕಣಕ್ಕಿಳಿಸಿದೆ.

ಹಾಲಿ ಚಾಂಪಿಯನ್ ಆಗಿರುವ ಚೋಪ್ರಾ ನೇರ ಪ್ರವೇಶ ಪಡೆದರೆ, ಭಾರತದ ಇತರ ಮೂವರು ವರ್ಲ್ಡ್ ರ್ಯಾಂಕಿಂಗ್‌ ನ ಮೂಲಕ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಅರ್ಹತಾ ಸುತ್ತಿನಲ್ಲಿ ಎರಡು ಗುಂಪುಗಳಾಗಿ ವಿಭಜಿಸಲಾಗಿದ್ದು, ‘ಎ’ ಗುಂಪಿನಲ್ಲಿ ಚೋಪ್ರಾ, ವೆಬೆರ್, ವಾಲ್ಕಟ್, ವಡ್ಲೆಚ್ ಹಾಗೂ ಸಚಿನ್ ಸಹಿತ 19 ಸ್ಪರ್ಧಾಳುಗಳಿದ್ದಾರೆ. ‘ಬಿ’ ಗುಂಪಿನಲ್ಲಿ ನದೀಂ, ಪೀಟರ್ಸ್, ಯೆಗೊ, ಡಾ ಸಿಲ್ವಾ, ರೋಹಿತ್, ಯಶ್ವೀರ್ ಹಾಗೂ ಶ್ರೀಲಂಕಾದ ರಮೇಶ್ ತರಂಗ ಸಹಿತ 18 ಅತ್ಲೀಟ್‌ಗಳಿದ್ದಾರೆ.

ಗುರುವಾರ ನಿಗದಿಯಾಗಿರುವ ಫೈನಲ್ ಸುತ್ತಿಗೆ ಅರ್ಹತೆ ಪಡೆಯಲು ಅರ್ಹತಾ ಸುತ್ತಿನಲ್ಲಿ 84.50 ಮೀ.ದೂರ ಜಾವೆಲಿನ್ ಎಸೆಯಬೇಕು. ಅಗ್ರ-12 ಅತ್ಲೀಟ್‌ ಗಳು ಫೈನಲ್‌ಗೆ ಪ್ರವೇಶಿಸಲಿದ್ದಾರೆ.

ಬುಡಾಪೆಸ್ಟ್‌ ನಲ್ಲಿ ನಡೆದಿದ್ದ ಈ ಹಿಂದಿನ ಆವೃತ್ತಿಯ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 88.17 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದ ಚೋಪ್ರಾ ಚಿನ್ನದ ಪದಕ ಜಯಿಸಿದ್ದರು. ನದೀಂ(87.82 ಮೀ.)ಹಾಗೂ ವಡ್ಲೆಚ್(86.67 ಮೀ.)ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದಾರೆ.

27ರ ಹರೆಯದ ಚೋಪ್ರಾ ಟೋಕಿಯೊದ ಒಲಿಂಪಿಕ್ಸ್ ಸ್ಟೇಡಿಯಂನಲ್ಲಿ ಸವಾಲನ್ನು ಎದುರಿಸಲಿದ್ದು, 2021ರಲ್ಲಿ ಇದೇ ಕ್ರೀಡಾಂಗಣದಲ್ಲಿ ಐತಿಹಾಸಿಕ ಒಲಿಂಪಿಕ್ಸ್ ಚಿನ್ನ ಗೆದ್ದಿದ್ದರು. ಚೋಪ್ರಾ ಮೇನಲ್ಲಿ ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀ.ದೂರಕ್ಕೆ ಜಾವೆಲಿನ್ ಎಸೆದು ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಆದರೆ ಈ ವರ್ಷದುದ್ದಕ್ಕೂ ಚೋಪ್ರಾ ಸ್ಥಿರ ಪ್ರದರ್ಶನ ನೀಡಿಲ್ಲ.

ಜರ್ಮನಿಯ ವೆಬೆರ್ ಈ ವರ್ಷ ಮೂರು ಬಾರಿ 90ಮೀ.ಗೂ ಅಧಿಕ ದೂರ ಜಾವೆಲಿನ್ ಎಸೆದಿದ್ದಾರೆ. ಇತ್ತೀಚೆಗೆ ಡೈಮಂಡ್ ಲೀಗ್ ಟ್ರೋಫಿ ಟೂರ್ನಿಯಲ್ಲಿ ಜಯಶಾಲಿಯಾಗಿದ್ದರು. ವೆಬೆರ್ ಈ ವರ್ಷ ಚೋಪ್ರಾ ವಿರುದ್ದ 3-1 ಹೆಡ್-ಟು-ಹೆಡ್ ದಾಖಲೆ ಹೊಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News