ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ : ನೀರಜ್ ಚೋಪ್ರಾ, ಸಚಿನ್ ಯಾದವ್ ಫೈನಲ್‌ಗೆ ಅರ್ಹತೆ
ನೀರಜ್ ಚೋಪ್ರಾ | PC : PTI
ಟೋಕಿಯೊ, ಸೆ, 17: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ಉದಯೋನ್ಮುಖ ಜಾವೆಲಿನ್ ಪಟು ಸಚಿನ್ ಯಾದವ್ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.
ಬುಧವಾರ ನಡೆದ ಅರ್ಹತಾ ಸುತ್ತಿನ ‘ಎ’ ಗುಂಪಿನಲ್ಲಿ ಹಾಲಿ ಚಾಂಪಿಯನ್ ನೀರಜ್ ತನ್ನ ಮೊದಲ ಪ್ರಯತ್ನದಲ್ಲೇ 84.85 ಮೀ.ದೂರಕ್ಕೆ ಜಾವೆಲಿನ್ ಎಸೆದು ಫೈನಲ್‌ಗೆ ಅರ್ಹತೆ ಪಡೆದರು.
ಭಾರತದ ಸಚಿನ್ ಯಾದವ್ ಕೂಡ ಅರ್ಹತಾ ಸುತ್ತಿನ ‘ಎ’ ಗುಂಪಿನಲ್ಲಿ ಭಾಗವಹಿಸಿದ್ದು, 83.67ಮೀ.ದೂರ ಜಾವೆಲಿನ್ ಎಸೆದು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಭಾರತದ ಇಬ್ಬರು ಅತ್ಲೀಟ್‌ಗಳು ಫೈನಲ್‌ನಲ್ಲಿ ಸ್ಥಾನ ಪಡೆದರು.
ಗುರುವಾರ ನಡೆಯಲಿರುವ ಫೈನಲ್‌ನಲ್ಲಿ ಭಾಗವಹಿಸಲಿರುವ ಅಗ್ರ-12 ಜಾವೆಲಿನ್ ಎಸೆತಗಾರರ ಪೈಕಿ ಸಚಿನ್ 10ನೇ ಸ್ಥಾನ ಪಡೆದರು.
ಅರ್ಹತಾ ಸುತ್ತಿನ ‘ಬಿ’ ಗುಂಪಿನಲ್ಲಿದ್ದ ಭಾರತದ ಇನ್ನಿಬ್ಬರು ಜಾವೆಲಿನ್ ಸ್ಪರ್ಧಿಗಳಾದ ರೋಹಿತ್ ಯಾದವ್ ಹಾಗೂ ಯಶ್ ವೀರ್ ಸಿಂಗ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು.
ರೋಹಿತ್ ತನ್ನ ಮೊದಲ ಪ್ರಯತ್ನದಲ್ಲಿ 77.81 ಮೀ.ದೂರಕ್ಕೆ ಜಾವೆಲಿನ್ ಎಸೆದು ತನ್ನ ಶ್ರೇಷ್ಠ ಪ್ರದರ್ಶನ ನೀಡಿದರೆ, ಯಶ್ ವೀರ್ ತನ್ನ ಕೊನೆಯ ಪ್ರಯತ್ನದಲ್ಲಿ 77.51 ಮೀ.ದೂರಕ್ಕೆ ಜಾವೆಲಿನ್ ಎಸೆದಿದ್ದರೂ ಫೈನಲ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ. ಫೈನಲ್‌ಗೆ ಅರ್ಹತೆ ಪಡೆಯಲು 84.50 ಮೀ.ದೂರಕ್ಕೆ ಜಾವೆಲಿನ್ ಎಸೆಯಬೇಕು.
ಒಲಿಂಪಿಕ್ಸ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಂ ಮೊದಲೆರಡು ಎಸೆತಗಳಲ್ಲಿ 76.99 ಮೀ. ಹಾಗೂ 74.17 ಮೀ.ದೂರಕ್ಕೆ ಜಾವೆಲಿನ್ ಎಸೆದು ಕಳಪೆ ಪ್ರದರ್ಶನ ನೀಡಿದರು. ಆ ನಂತರ 85.28 ಮೀ.ದೂರಕ್ಕೆ ಜಾವೆಲಿನ್ ಎಸೆದು ಫೈನಲ್‌ಗೆ ಅರ್ಹತೆ ಪಡೆದರು.
2024ರ ಒಲಿಂಪಿಕ್ಸ್ ನಂತರ ಮೊದಲ ಬಾರಿ ನದೀಂ ಅವರು ನೀರಜ್ ಚೋಪ್ರಾರನ್ನು ಗುರುವಾರ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಜುಲಿಯಸ್ ಯೆಗೊ, ಆ್ಯಂಡರ್ಸನ್ ಪೀಟರ್ಸ್ ಹಾಗೂ ಜುಲಿಯನ್ ವೆಬೆರ್ ಉತ್ತಮ ಫಾರ್ಮ್‌ನಲ್ಲಿದ್ದು, ಫೈನಲ್‌ನಲ್ಲಿ ಮಿಂಚುವ ನಿರೀಕ್ಷೆ ಇದೆ.
ಗ್ರೆನೆಡಾದ ಆ್ಯಂಡರ್ಸನ್ ಪೀಟರ್ಸ್(89.53 ಮೀ.)ಫೈನಲ್‌ಗೆ ಅರ್ಹತೆ ಪಡೆದ 12 ಜಾವೆಲಿನ್ ಎಸೆತಗಾರರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಜರ್ಮನಿಯ ಜುಲಿಯನ್ ವೆಬೆರ್(87.21), ಕೀನ್ಯದ ಜುಲಿಯಸ್ ಯೆಗೊ(85.96), ಪೋಲ್ಯಾಂಡ್‌ನ ಡೇವಿಡ್ ವೆಗ್ನೆರ್(85.67), ಪಾಕಿಸ್ತಾನದ ಅರ್ಷದ್ ನದೀಂ(85.28), ಭಾರತದ ನೀರಜ್ ಚೋಪ್ರಾ(84.95), ಅಮೆರಿಕದ ಕರ್ಟಿಸ್ ಥಾಮ್ಸನ್(84.72), ಝೆಕ್‌ನ ಜೇಕಬ್ ವಡ್ಲೆಚ್(84.11), ಟ್ರಿನಿಡಾಡ್‌ನ ಕಿಶೋರ್ನ್ ವಾಲ್ಕಟ್(83.93), ಭಾರತದ ಸಚಿನ್ ಯಾದವ್(83.67), ಆಸ್ಟ್ರೇಲಿಯದ ಕ್ಯಾಮರೊನ್ ಮೆಕ್‌ಎಂಟಯರ್(83.03) ಶ್ರೀಲಂಕಾದ ರಮೇಶ್ ತರಂಗ(82.80) ಆ ನಂತರದ ಸ್ಥಾನದಲ್ಲಿದ್ದಾರೆ.
ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯು ಗುರುವಾರ ಭಾರತದ ಕಾಲಮಾನ ಮಧ್ಯಾಹ್ನ 3:53ಕ್ಕೆ ಆರಂಭವಾಗಲಿದೆ.