2018ರ ನಂತರ ಮೊದಲ ಬಾರಿ ಕಳಪೆ ಪ್ರದರ್ಶನ ನೀಡಿದ ನೀರಜ್ ಚೋಪ್ರಾ
ನೀರಜ್ ಚೋಪ್ರಾ | PC : PTI
ಹೊಸದಿಲ್ಲಿ, ಸೆ.19: ಭಾರತದ ಜಾವೆಲಿನ್ ಎಸೆತದ ‘ಗೋಲ್ಡನ್ ಬಾಯ್’ ನೀರಜ್ ಚೋಪ್ರಾ ಟೋಕಿಯೊದಲ್ಲಿ ಗುರುವಾರ ನಡೆದ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ 84.03 ಮೀ.ದೂರ ಜಾವೆಲಿನ್ ಎಸೆದು 8ನೇ ಸ್ಥಾನ ಪಡೆದರು. ಈ ಮೂಲಕ 2018ರ ನಂತರ ಜಾಗತಿಕ ಕ್ರೀಡಾಕೂಟದಲ್ಲಿ ಮೊದಲ ಬಾರಿ ಕಳಪೆ ಪ್ರದರ್ಶನ ನೀಡಿದ್ದಾರೆ.
ಪ್ರಾಥಮಿಕ ಸುತ್ತಿನಲ್ಲಿ 84.85 ಮೀ.ದೂರ ಜಾವೆಲಿನ್ ಎಸೆದು ಫೈನಲ್‌ಗೆ ಅರ್ಹತೆ ಪಡೆದಿದ್ದ ಚೋಪ್ರಾ, ಫೈನಲ್‌ನಲ್ಲಿ ಪರದಾಟ ನಡೆಸಿದರು. ಫೈನಲ್‌ನಲ್ಲಿ ಅವರ ಶ್ರೇಷ್ಠ ಪ್ರದರ್ಶನವು 2ನೇ ಪ್ರಯತ್ನದಲ್ಲಿ(84.03 ಮೀ.) ಬಂತು. 5ನೇ ಸುತ್ತಿನಲ್ಲೇ ಚೋಪ್ರಾ ಹೋರಾಟ ಅಂತ್ಯವಾಯಿತು.
‘‘ಬೆನ್ನುನೋವು ನನ್ನ ಲಯದ ಮೇಲೆ ಪರಣಾಮಬೀರಿತು’’ ಎಂದು ಚೋಪ್ರಾ ಬಹಿರಂಗಪಡಿಸಿದರು. ಈ ಫಲಿತಾಂಶವು ಚೋಪ್ರಾ ಅಭಿಮಾನಿಗಳಿಗೆ ಆಘಾತವುಂಟು ಮಾಡಿದೆ. ಇತ್ತೀಚೆಗಿನ ವರ್ಷಗಳಲ್ಲಿ ಏಪರೂಪ ಪ್ರದರ್ಶನ ನೀಡುತ್ತಿರುವ ಚೋಪ್ರಾ ಪ್ರಮುಖ ಪಂದ್ಯಾವಳಿಗಳಲ್ಲಿ ಟಾಪ್-3ಕ್ಕಿಂತ ಹೊರಗೆ ಉಳಿದಿರುವುದು ತೀರಾ ಅಪರೂಪ.
2018ರಲ್ಲಿ ತನ್ನ ವೃತ್ತಿಜೀವನ ಆರಂಭಿಸಿರುವ ಚೋಪ್ರಾ ಅವರು 2021ರ ಒಲಿಂಪಿಕ್ಸ್‌ನಲ್ಲಿ ಚಿನ್ನ, 2024ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಗಳು ಹಾಗೂ ಹಲವು ಬಾರಿ ಡೈಮಂಡ್ ಲೀಗ್ ಪ್ರಶಸ್ತಿಗಳನ್ನು ಗೆದ್ದಿದ್ದರು. ಅವರು ಪ್ರತೀ ಬಾರಿಯೂ 85 ಮೀ.ಗಿಂತಲೂ ಹೆಚ್ಚು ದೂರ ಜಾವೆಲಿನ್ ಎಸೆಯುತ್ತಿದ್ದರು. ಈ ವರ್ಷಾರಂಭದಲ್ಲಿ ದೋಹಾದಲ್ಲಿ ಜೀವನಶ್ರೇಷ್ಠ ಪ್ರದರ್ಶನ(90.23 ಮೀ.)ನೀಡಿದ್ದರು.
ಚೋಪ್ರಾ 2018ರಲ್ಲಿ ಒಸ್ಟ್ರಾವದಲ್ಲಿ ನಡೆದಿದ್ದ ಐಎಎಎಫ್ ಕಾಂಟಿನೆಂಟಲ್ ಕಪ್‌ನಲ್ಲಿ 80.24 ಮೀ.ದೂರ ಜಾವೆಲಿನ್ ಎಸೆದು ಕಳಪೆ ಪ್ರದರ್ಶನ ನೀಡಿದ್ದರು. ಆ ಬಳಿಕ ಅವರು ಬಹುತೇಕ ಪ್ರಮುಖ ಪಂದ್ಯಾವಳಿಯಲ್ಲಿ ಪದಕಗಳನ್ನು ಗೆಲ್ಲುತ್ತಾ ಬಂದಿದ್ದಾರೆ.
ಈ ಫಲಿತಾಂಶವು 27ರ ಹರೆಯದ ಚೋಪ್ರಾಗೆ ದೊಡ್ಡ ಹಿನ್ನಡೆಯಲ್ಲ. ಈ ವರ್ಷಾರಂಭದಲ್ಲಿ ದೋಹಾದಲ್ಲಿ ನೀಡಿರುವ ಪ್ರದರ್ಶನವು(90.23 ಮೀ.)ಅವರ ಸಾಮರ್ಥ್ಯವನ್ನು ತೋರ್ಪಡಿಸಿದೆ.
► 2018ರಿಂದ 2025ರ ತನಕ ನೀರಜ್ ಚೋಪ್ರಾ ಅವರ ಸಾಧನೆಯ ನೋಟ
ವರ್ಷ ಸ್ಪರ್ಧಾವಳಿ ಸ್ಥಳ ಪ್ರದರ್ಶನ ಸ್ಥಾನ
2018 ಸಿಡಬ್ಲ್ಯುಜಿ ಗೋಲ್ಡ್‌ಕೋಸ್ಟ್ 86.47 ಮೀ. ಪ್ರಥಮ
2018 ಏಶ್ಯನ್ ಗೇಮ್ಸ್ ಜಕಾರ್ತ 88.06 ಮೀ. ಪ್ರಥಮ
2018 ಝೂರಿಚ್ ಡಿಎಲ್ 85.73 ಮೀ. 4ನೇ
2018 ಕಾಂಟಿನೆಂಟಲ್ ಕಪ್ ಒಸ್ಟ್ರಾವ 80.24 ಮೀ. 6ನೇ
2020 ಲೀಗ್ ಕ್ರೀಡಾಕೂಟ ಪಾಚೆಫ್‌ಸ್ಟ್ರೂಮ್ 87.86 ಮೀ. ಪ್ರಥಮ
2021 ಟೋಕಿಯೊ ಒಲಿಂಪಿಕ್ಸ್ ಟೋಕಿಯೊ 87.58 ಮೀ. ಪ್ರಥಮ
2022 ವಿಶ್ವ ಚಾಂಪಿಯನ್‌ಶಿಪ್ ಒರೆಗಾನ್ 88.13 ಮೀ. 2ನೇ
2022 ಲುಸಾನ್ ಡಿಎಲ್ ಲುಸಾನ್ 89.08 ಮೀ. ಪ್ರಥಮ
2022 ಝೂರಿಚ್‌ಡಿಎಲ್ ಝೂರಿಚ್ 88.44 ಮೀ. ಪ್ರಥಮ
2023 ವಿಶ್ವ ಚಾಂಪಿಯನ್‌ಶಿಪ್ ಬುಡಾಪೆಸ್ಟ್ 88.17 ಮೀ. ಪ್ರಥಮ
2023 ಏಶ್ಯನ್ ಗೇಮ್ಸ್ ಹಾಂಗ್‌ಝೌ 88.88 ಮೀ. ಪ್ರಥಮ
2024 ಪ್ಯಾರಿಸ್ ಗೇಮ್ಸ್ ಪ್ಯಾರಿಸ್ 89.45 ಮೀ. 2ನೇ
2024 ಲುಸಾನ್ ಡಿಎಲ್ ಲುಸಾನ್ 89.49 ಮೀ. 2ನೇ
2025 ದೋಹಾ ಡಿಎಲ್ ದೋಹಾ 90.23 ಮೀ. 2ನೇ
2025 ಮೀಟಿಂಗ್‌ಡಿ ಪ್ಯಾರಿಸ್ ಪ್ಯಾರಿಸ್ 88.16 ಮೀ. 1ನೇ
2025 ಒಸ್ಟ್ರಾವ ಗೋಲ್ಡನ್‌ಸ್ಪೈಕ್ ಒಸ್ಟ್ರಾವ 85.29 ಮೀ. 1ನೇ
2025 ನೀರಜ್‌ಚೋಪ್ರಾಕ್ಲಾಸಿಕ್ ಬೆಂಗಳೂರು 86.18 ಮೀ. 1ನೇ
2025 ಝೂರಿಚ್ ಡಿಎಲ್ ಝೂರಿಚ್ 85.01 ಮೀ. 2ನೇ
2025 ವಿಶ್ವ ಚಾಂಪಿಯನ್‌ಶಿಪ್(ಫೈನಲ್) ಟೋಕಿಯೊ 84.03 ಮೀ. 8ನೇ